ಬಿಜೆಪಿ ದುರಾಡಳಿತಕ್ಕೆ ಬಡವರ ಬದುಕು ಸಂಕಷ್ಟ: ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಜಿಲ್ಲಾ ಸುದ್ದಿ

ಬಿಜೆಪಿ ದುರಾಡಳಿತಕ್ಕೆ ಬಡವರ ಬದುಕು ಸಂಕಷ್ಟ: ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಸಿಲಿಂಡರ್, ಅಡುಗೆ ಎಣ್ಣೆ, ಬೇಳೆ ಕಾಳು ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಲ್ಲಿ ಕಾಂಗ್ರೆಸ್ ಪಕ್ಷ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ತೇಕಲವಟ್ಟಿ, ಉಪ್ಪರಿಗೇನಹಳ್ಳಿ, ಎಚ್.ಡಿ.ಪುರ, ಚಿತ್ರಹಳ್ಳಿ, ಟಿ.ನುಲೆನೂರಿನಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಹಮ್ಮಿಕೊಂಡಿದ್ದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

 

200 ಯುನಿಟ್ ಉಚಿತ ವಿದ್ಯುತ್, ಕುಟುಂಬದ ಯಜಮಾನಿಗೆ ಮಾಸಿಕ 2000 ರೂ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಹಾಗೂ ಪದವೀಧರರಿಗೆ ರೂ.3000,ಡಿಪ್ಲೋಮಾ ಪದವೀಧರರಿಗೆ ರೂ.1500 ನೀಡಲು ಪಕ್ಷ ತೀರ್ಮಾನಿಸಿದ್ದು, ಈ ಮೂಲಕ ಬಿಜೆಪಿ ಸಂಕಷ್ಟಕ್ಕೆ ದೂಡಿರುವ ಜನರನ್ನು ಮೇಲೆತ್ತುವ ಕಾರ್ಯ ಮಾಡಲಿದೆ ಎಂದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.99ರಷ್ಟನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಈಗಲೂ ನೀಡಿರುವ ವಾಗ್ದಾನ ಅನುಷ್ಠಾನಕ್ಕೆ ತರುತ್ತೇವೆ. ಜನರ ಪರ ಆಡಳಿತ ಮಾಡುವುದು ಹೇಗೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಗೊತ್ತಿದೆ ಎಂದರು.
ವಿದೇಶದಿಂದ ಕಪ್ಪು ಹಣ ತರುವುದು ಸೇರಿ ನೂರಾರು ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ, ರಾಜ್ಯದಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದೆ. ಅದರ ಪರಿಣಾಮ ಭ್ರಷ್ಟಾಚಾರ ಮೀತಿಮೀರಿದೆ. ಹೊಳಲ್ಕೆರೆ ಕ್ಷೇತ್ರದಲ್ಲೂ ಕೂಡ ಗುತ್ತಿಗೆದಾರರು, ಅಧಿಕಾರಿಗಳು ತೀವ್ರ ಸಂಕಷ್ಟ, ಒತ್ತಡಕ್ಕೆ ಸಿಲುಕಿದ್ದಾರೆ. ಕೆರೆ, ರಸ್ತೆ ಅಭಿವೃದ್ಧಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ದೂರಿದರು.

ಈ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆರಂಭದಲ್ಲಿಯೇ ಕ್ಷೇತ್ರದ ಎಲ್ಲ ಅವ್ಯವಹಾರಗಳನ್ನು ತನಿಖೆಗೆ ವಹಿಸಿ, ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು

Leave a Reply

Your email address will not be published. Required fields are marked *