ಈ ಸಂದೇಶದಿಂದ ಆತಂಕಕ್ಕೊಳಗಾದ ಪೋಷಕರು

ರಾಜ್ಯ

ವಿದ್ಯಾರ್ಥಿಗಳೇ  ಪೋಷಕರೆ ಈ ಮಸೇಜ್ ಓದಿ
ಮೋಸ ಹೋಗಬೇಡಿ

 

 

ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ರೂ. 24,000/-ಗಳ ಸ್ಕಾಲರ್ ವಿದ್ದು, ಜನ ಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು ಜನರಲ್ಲಿ ಗೊಂದಲಕ್ಕೀಡು ಮಾಡಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ. ದಕ್ಷಿಣ ಕನ್ನಡ, ಮಂಗಳೂರು ಎಂಬ ಮೊಹರು ಹಾಕಿರುವ ಈ ವಾಟ್ಸಪ್ ಸಂದೇಶ ಜನರ ಪೋನ್‌ಗಳಲ್ಲಿ ಒಂದು ತಿಂಗಳಿಂದ ಹರಿದಾಡುತ್ತಿದೆ. ಈ ಸಂದೇಶವನ್ನು ನೋಡಿದ ಜನ ಪ್ರತಿನಿತ್ಯ ಗ್ರಾಮ ಪಂಚಾಯತ್, ಕಂದಾಯ ಅಧಿಕಾರಿಗಳ ಕಛೇರಿ, ತಾಲ್ಲೂಕು, ಜಿಲ್ಲಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ ಸೇರಿ ಎಲ್ಲಾ ಕಡೆ ಅಲೆದಾಡುತ್ತಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಛೇರಿಯಲ್ಲಿ ಪ್ರತಿದಿನ ನೂರಾರು ಜನರು ಬಂದು ಯೋಜನೆಯ ಬಗ್ಗೆ ವಿಚಾರಿಸಿ ಅರ್ಜಿ ನೀಡುತ್ತಿರುವುದು ಅಧಿಕಾರಿಗಳಲ್ಲಿ ಚಿಂತೆಗೀಡು ಮಾಡಿದೆ. ಬಹಳಷ್ಟು ಜನರು ದೂರವಾಣಿ ಕರೆ ಮೂಲಕವು ವಿಚಾರಿಸುತ್ತಿದ್ದಾರೆ. ಈ ಸಂದೇಶವನ್ನು ಬಂಡವಾಳ ಮಾಡಿಕೊಂಡಿರುವ ಕೆಲವರು ಅಮಾಯಕ, ಮುಗ್ಧ ಜನರನ್ನು ಸುಲಿಗೆ ಮಾಡಲು ಶುರು ಮಾಡಿದ್ದಾರೆ. ಒಂದೊಂದು ಅರ್ಜಿಗೆ ಕನಿಷ್ಠ 5 ರಿಂದ 10 ಸಾವಿರ ರೂಗಳನ್ನು ವಸೂಲಿ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಮೋಸ ಹೋಗದಂತೆ ಎಚ್ಚರಿಕೆಯಿಂದಿರಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪುರಸ್ಕತ ಪ್ರಾಯೋಜಕತ್ವ ಈ ಯೋಜನೆಯನ್ನು 2011ರಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದ ವ್ಯಾಪ್ತಿಗೆ ತರಲಾಗಿದೆ. ಸಂಕಷ್ಟಕ್ಕೆ ಈಡಾಗುವ ಕುಟುಂಬದಲ್ಲಿನ ಮಗು, ಜೈವಿಕ ಕುಟುಂಬದಲ್ಲೇ ಮುಂದುವರೆಯಲು, ಮಗುವಿನ ಶಿಕ್ಷಣ, ಮಕ್ಕಳು ನಿರ್ಗತಿಕರಾಗುವುದು, ಸಂಕಷ್ಟಕ್ಕೀಡಾಗುವುದು, ಓಡಿಹೋಗುವುದು, ಬಲವಂತದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದವುಗಳಿಂದ ತಡೆಗಟ್ಟುವ ಪ್ರಯತ್ನ ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯ ಪ್ರಕಾರ ಫಲಾನುಭವಿಯಾಗಲು ಕೆಲವು ವಿಶೇಷ ಮಾನದಂಡಗಳಿವೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು, ಪೋಷಕರು ಕಾರಾಗೃಹದಲ್ಲಿರುವ ಮಕ್ಕಳು, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಪಟ್ಟಿರುವವರ ಮಕ್ಕಳು, ಪಿ.ಎಂ ಕೇರ್ ಚಿಲ್ಟನ್ ಯೋಜನೆಯ ಅನುಮೋದಿತ ಮಕ್ಕಳು, ಬಾಲಕಾರ್ಮಿಕ ಸಂತ್ರಸ್ಥರು, ಮಕ್ಕಳ ಕಳ್ಳಸಾಗಾಣಿಕೆಗೆ ಒಳಗಾದ ಮಕ್ಕಳು, ಬಾಲ್ಯವಿವಾಹಕ್ಕೊಳಗಾದ ಮಕ್ಕಳು, ಪೋಕೋ ಸಂತ್ರಸ್ಥ ಮಕ್ಕಳು, ಪೋಷಕರಿಬ್ಬರೂ ಮಾರಾಣಾಂತಿಕ ಕಾಯಿಲೆಗೆ ತುತ್ತಾಗಿರುವವರ ಮಕ್ಕಳು, ಬಾಲಸ್ವರಾಜ್ ಪೋರ್ಟಲ್ ನಲ್ಲಿ ನೊಂದಾಯಿಸಲಾದ ಮಕ್ಕಳು, ಪಾಲನೆ ಮತ್ತು ರಕ್ಷಣೆಗೆ ಅಗತ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು ಹಾಗೂ ಇತರೆ ದುಡಿಯುವ ಪೋಷಕರನ್ನು ಕಳೆದುಕೊಂಡ ವಿಧವೆ, ವಿಚ್ಛೇದಿತ ಮತ್ತು ವಿಸ್ತತ ಕುಟುಂಬದ ಮಕ್ಕಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುವರು. ಅದ್ದರಿಂದ ಸುಳ್ಳು ಸಂದೇಶ ನಂಬದಿರುವಂತೆ ಸಾರ್ವಜನಿಕರಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ  ಕೋರಿದ್ದಾರೆ.

Leave a Reply

Your email address will not be published. Required fields are marked *