ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಿಸಿ: ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ

ರಾಜ್ಯ

ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಿಸಿ: ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ

 

 

ಚಿತ್ರದುರ್ಗ:  ಜಿಲ್ಲೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಪ್ರಮಾಣ ಹೆಚ್ಚಳಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರೈತ ಉತ್ಪಾದಕ ಸಂಸ್ಥೆಗಳಿಗೆ ಮೂರು ತಿಂಗಳ ಸ್ಯಾಚುರೇಷನ್ ಡ್ರೆöÊವ್ ತರಬೇತಿಗಾಗಿ ಜಿಲ್ಲಾ ಮಟ್ಟದ ರೈತ ಉತ್ಪಾದಕರ ಸಂಸ್ಥೆಗಳ  ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಹಾಗೂ ಸಂಬಂಧಿತ ವಿವಿಧ ಇಲಾಖೆಗಳು ಆಸಕ್ತಿ ವಹಿಸಿ ತಿಂಗಳಿಗೆ ಕನಿಷ್ಟ ಒಂದೆರೆಡು ರೈತ ಉತ್ಪಾದಕ ಸಂಸ್ಥೆಗಳ ರಚನೆ ಮಾಡಬೇಕು. ರೈತರಿಗೆ ಅಧ್ಯಯನ ಶಿಬಿರ, ತರಬೇತಿ, ಕಡಿಮೆ ಬಂಡಾವಳ ಹೂಡಿಕೆ ಮಾಡಿ ಹೆಚ್ಚಿನ ಆಧಾಯ ಗಳಿಸುವುದು ಹೇಗೆ ಎಂಬುವುದ ಕುರಿತು ರೈತರಿಗೆ ಅರಿವು ಮೂಡಿಸಿ, ಕೃಷಿ ಕ್ಷೇತ್ರದ ಸುಧಾರಣೆಗೆ ಹಾಗೂ  ಕೃಷಿಯಲ್ಲಿ ಆಧುನಿಕರಣಕ್ಕೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಚಳ್ಳಕೆರೆ ಹಾಗೂ ಮೊಳಕಾಲ್ಮುರು ಭಾಗದಲ್ಲಿ ರೇಷ್ಮೆ ಕೃಷಿ ಹೆಚ್ಚು ಪ್ರಚಲಿತದಲ್ಲಿದೆ. ಇದರೊಂದಿಗೆ ರೈತರು ಕುರಿ ಸಾಕಾಣಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಅಸಂಘಟಿತ ರೇಷ್ಮೆ ಕೃಷಿಕರು ಹಾಗೂ ಕುರಿಗಾಹಿಗಳ ರೈತ ಉತ್ಪಾದಕ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ಸಿರಿಧಾನ್ಯ ಬೆಳೆಯನ್ನು ಹೊಸದುರ್ಗ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ೨೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಮಾಡಲಾಗಿದ್ದು, ಇಲ್ಲಿ ಸಿರಿಧಾನ್ಯ ಬೆಳೆಯುವ ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತ ಉತ್ಪಾದಕ ಸಂಸ್ಥೆಗಳಿಂದ ಸದಸ್ಯರಿಗೆ ಪರಸ್ಪರ ಸಹಾಯ, ಜ್ಞಾನ ಹಾಗೂ ಅನುಭವ ಹಂಚಿಕೆ, ಕ್ಷೇತ್ರ ನಿರ್ವಹಣೆಯ ಸರಳೀಕರಣ, ಸೂಕ್ತ ತಂತ್ರಜ್ಞಾನ ಬಳಕೆ, ಸಂಗ್ರಹಣೆ ಮತ್ತು ಶ್ರೇಣಿಕರಣ, ಉತ್ಪಾದಕತೆ ಹೆಚ್ಚಿಸುವಿಕೆ, ಕೊಯ್ಲೋತ್ತರ ನಷ್ಟಗಳ ಕಡಿತ, ಮಾರುಕಟ್ಟೆ ಸಂಪರ್ಕ ಸುಧಾರಣೆ ಹಾಗೂ ವೃದ್ಧಿ ಹಾಗೂ ಕೃಷಿ ಉತ್ಪನ್ನ ಮೌಲ್ಯವರ್ಧನೆಯಿಂದ ರೈತರು ಆರ್ಥಿಕತೆಗೆ ಹೆಚ್ಚು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಮಾಡಿ, ರೈತರಿಗೆ ನೆರವು, ಸರ್ಕಾರದ ಸೌಲಭ್ಯ ಪಡೆಯಲು ಸಹಾಯಕವಾಗಲಿದೆ ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಇಲಾಖೆಯಡಿ ೨೦, ತೋಟಗಾರಿಕೆ ಇಲಾಖೆಯಡಿ ೬, ನಬಾರ್ಡ್ ಅಡಿ ೭ ಸೇರಿ ಒಟ್ಟು ೩೩ ರೈತ ಉತ್ಪಾದಕ ಸಂಘಗಳನ್ನು ರಚನೆ ಮಾಡಲಾಗಿದೆ. ಇದರಲ್ಲಿ ೨೧ ರೈತ ಉತ್ಪಾದಕ ಸಂಘಗಳು ಬೀಜ ಮಾರಾಟ, ರಸಗೊಬ್ಬರ ಹಾಗೂ ಕೀಟ ನಾಶಕ ಮಾರಾಟ ಮಾಡುವ ಪರವಾನಿಗೆ ಪಡೆದಿವೆ. ೧೭ ಎಪಿಎಂಸಿ ಹಾಗೂ ೯ ಎಫ್‌ಎಸ್‌ಎಸ್‌ಎಐ ಪರವಾನಿಗೆ ಪಡೆದಿವೆ. ೨೨ ರೈತ ಸಂಘಗಳು ಜಿ.ಎಸ್.ಟಿ ನೊಂದಣಿ ಮಾಡಿಕೊಂಡಿವೆ ಎಂದು ತಿಳಿಸಿದರು.
ರೈತ ಉತ್ಪಾದಕ ಸಂಸ್ಥೆಗಳ ರಚನೆ ವ್ಯಾಪಾರ ಅಭಿವೃದ್ಧಿ ಅನುಷ್ಠಾನಕ್ಕೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ಸಹ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಪಶುವೈದ್ಯಕೀಯ ತುರ್ತು ಚಿಕಿತ್ಸೆಯ ಟೋಲ್ “ಫ್ರೀ” ಸಂಖ್ಯೆ ೧೯೬೨ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಎನ್.ಕುಮಾರ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕೃಷಿ ಇಲಾಖೆಯ ಉಪನಿರ್ದೇಶಕರಾದ ಕೆ.ಎಸ್.ಶಿವಕುಮಾರ್, ಬಿ.ಎನ್.ಪ್ರಭಾಕರ್, ನಬಾರ್ಡ್ನ ಜಿಲ್ಲಾ ಸಂಯೋಜಕಿ ಕವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *