ನಿಗಮ ಸ್ಥಾಪಿಸಿದರೆ ಸಾಲದು ಐದು ನೂರು ಕೋಟಿ ಬಿಡುಗಡೆ ಮಾಡಬೇಕು ಪ್ರಣವಾನಂದ ಸ್ವಾಮೀಜಿ

ರಾಜ್ಯ

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ದಿ ನಿಗಮ ರಚಿಸಿದರೆ ಸಾಲದು. ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದರೊಳಗೆ ನಿಗಮಕ್ಕೆ ಐದು ನೂರು ಕೋಟಿ ರೂ. ಇಲ್ಲವೆ ಕನಿಷ್ಠ 250 ಕೋಟಿ ರೂ.ಗಳನ್ನಾದರೂ ಬಿಡುಗಡೆಗೊಳಿಸಬೇಕೆಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಮಹಾಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

 

 

ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ಈಡಿಗ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಲಶಾಸ್ತ್ರ ಅಧ್ಯಯನಕ್ಕೆ ನೀಡಿ ಈಡಿಗ ಜನಾಂಗದ ಪ್ರಾಧ್ಯಾಪಕರನ್ನು ನೇಮಿಸಿ ಒಂದು ವರ್ಷದೊಳಗೆ ವರದಿ ತರಿಸಿಕೊಳ್ಳಬೇಕು. ರಾಜಧಾನಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ನಿರ್ಮಾಣವಾಗಬೇಕು. ಹೆಂಡದ ಮಾರಯ್ಯ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು. ನಮ್ಮ ಇಷ್ಟೆಲ್ಲಾ ಬೇಡಿಕೆಗಳನ್ನು ಚುನಾವಣೆ ನೀತಿ ಸಂಹಿತಿ ಜಾರಿಯಾಗುವುದರೊಳಗೆ ಈಡೇರಿಸಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಈಡಿಗರ ಮಹಾಮಂಡಲ ದೇಶಾದ್ಯಂತ ಸಂಘಟನೆ ಮಾಡುತ್ತಿದೆ. ಈಡಿಗ, ಬಿಲ್ಲವ, ನಾಮಧಾರಿ ಹೆಸರುಗಳಿಂದ ಕರೆಯಲ್ಪಡುವ ನಮ್ಮ ಜನಾಂಗ ರಾಜ್ಯದಲ್ಲಿ ಎಪ್ಪತ್ತು ಲಕ್ಷದಷ್ಟಿದೆ. ಏಳು ಮಂದಿ ಶಾಸಕರು, ಇಬ್ಬರು ಮಂತ್ರಿಗಳಿದ್ದಾರೆ. ಸೇಂದಿ ಇಳಿಸಿ ಮಾರಾಟ ಮಾಡಿ ಬದುಕುವ ಜನಾಂಗ ನಮ್ಮದು. ಆದರೆ ರಾಜ್ಯ ಸರ್ಕಾರ ಸೇಂದಿ ಮಾರಾಟ ನಿಷೇಧಿಸಿದೆ. ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಬಂದ್ ಆಯಿತು. ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆಂಧ್ರ, ಕೇರಳ, ತೆಲಂಗಾಣ, ಗೋವಾದಲ್ಲಿ ನಮ್ಮ ಜನಾಂಗ ಜಾಸ್ತಿಯಿದೆ. ಈಡಿಗರು ರಾಜಕೀಯವಾಗಿ ಬೆಳೆಯಬಾರದೆಂಬ ದುರುದ್ದೇಶದಿಂದ ರಾಜ್ಯದಲ್ಲಿ ಸೇಂದಿ ಮಾರಾಟ ನಿಷೇಧಿಸಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾ ಪಾರ್ಲರ್ ತೆಗೆದು ಸೊಸೈಟಿ ಮೂಲಕ ಮಾರುವ ಚರ್ಚೆಯಾಗಿದೆ. ಏಪ್ರಿಲ್ 2 ರಂದು ಶಿವಮೊಗ್ಗದಲ್ಲಿ ಅಂತಿಮ ಸಭೆ ನಡೆಸಲಾಗುವುದು. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ನಮ್ಮ ಜನಾಂಗದ ಅಸ್ತಿತ್ವದ ಪ್ರಶ್ನೆಯಾಗಿದೆ. ಈಡಿಗ ಸಮಾಜ ಸಂಕಷ್ಟದಲ್ಲಿದೆ. ಕರ್ನಾಟಕದಲ್ಲಿ 2 ಎ ಪಟ್ಟಿಯಲ್ಲಿರುವ ನಮ್ಮ ಸಮಾಜವನ್ನು ಆರು ರಾಜ್ಯಗಳಲ್ಲಿ ಎಸ್.ಟಿ.ಗೆ ಸೇರ್ಪಡೆಗೊಳಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆ ಎಂದು ತಿಳಿಸಿದರು.
ರಾಷ್ಟ್ರೀಯ ಈಡಿಗ ಮಹಾ ಮಂಡಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಂಜೇಗೌಡ್ರು, ನ್ಯಾಯವಾದಿ ಜಗದೀಶ್ ಗುಂಡೇರಿ, ಸಿದ್ದೇಶ್, ಲೋಹಿತ್, ಶ್ರೀನಿವಾಸ್, ಅರೇನಹಳ್ಳಿ ತಿಪ್ಪೇಸ್ವಾಮಿ, ಪ್ರಸನ್ನಕುಮಾರ್, ಶ್ರೀನಿವಾಸ್ ಇನ್ನು ಮೊದಲಾದವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *