ಪಕ್ಷ ಸಂಘಟನೆಗೆ ನಿಯತ್ತಾಗಿದ್ದವರ ಹೆಸರು ಸೂಚಿಸುತ್ತೇನೆ: ತಾಯಣ್ಣ

ರಾಜಕೀಯ

ಪಕ್ಷ ಸಂಘಟನೆಗೆ ನೀಯತ್ತಾಗಿ ಕೆಲಸ ಮಾಡಿದವರ ಹೆಸರುಗಳನ್ನು ಪಕ್ಷದ ವರಿಷ್ಠರ ಮುಂದಿಡುತ್ತೇನೆಂದು ಜೆಡಿಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಮೀನಳ್ಳಿ ತಾಯಣ್ಣ ಹೇಳಿದರು.

 

 

ವಿಧಾನಸಭೆ ಚುನಾವಣೆ ದೃಷ್ಠಿಯಿಂದ ಜೆಡಿಎಸ್. ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೀನಳ್ಳಿ ತಾಯಣ್ಣ ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆಯಿಟ್ಟು ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ. ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ರಾಜ್ಯದಲ್ಲಿ ಸಂಚರಿಸತ್ತಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಚಳ್ಳಕೆರೆ ಹಾಗೂ ಹೊಸದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಹಾಗಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಂಡರೆ ಪ್ರಯೋಜನವಿಲ್ಲ. ಮನೆ ಮನೆಗೆ ತಿರುಗಿ ಜೆಡಿಎಸ್.ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ತಿರುಗಾಡಲು ಸಿದ್ದನಿದ್ದು, ದಿನಾಂಕ ನಿಗಧಿಪಡಿಸಿ. ಜನ ಮತ ಹಾಕಲು ರೆಡಿಯಿದ್ದಾರೆ. ಅಭ್ಯರ್ಥಿಗಳು ಜನರ ಬಳಿ ಹೋಗುತ್ತಿಲ್ಲ ಎನ್ನುವ ವಿಚಾರವನ್ನು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರ ಗಮನಕ್ಕೆ ತಂದಿದ್ದೇನೆಂದರು.
ತಾಲ್ಲೂಕು, ಬೂತ್, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳ ನೇಮಕವಾಗಿದೆ ಎಂದುಕೊಂಡಿದ್ದೇನೆ. ಎಲ್ಲೆಲ್ಲಿ ಆಗಿಲ್ಲವೋ ಅಲ್ಲಿ ಇನ್ನೊಂದು ವಾರದೊಳಗೆ ಪದಾಧಿಕಾರಿಗಳ ನೇಮಕ ಪೂರ್ಣಗೊಳಿಸುವಂತೆ ಸೂಚಿಸಿದರು.
ಜೆಡಿಎಸ್. ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡುತ್ತ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುವುದರಿಂದ ಆರು ತಾಲ್ಲೂಕಿನ ಅಧ್ಯಕ್ಷರುಗಳು ಇನ್ನೆರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದರೆ ಜಿಲ್ಲೆಗೆ ಉಸ್ತುವಾರಿಯಾಗಿರುವ ಮೀನಳ್ಳಿ ತಾಯಣ್ಣರವರಿಗೆ ವರದಿ ನೀಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ವಿನಂತಿಸಿದರು.
ಜಿಲ್ಲೆಯಲ್ಲಿ ಪಕ್ಷ ಸಂಕಷ್ಠದಲ್ಲಿದೆ. ಪಕ್ಷದ ವರಿಷ್ಠರು ಯಾರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಲಿ ಅವರ ಪರವಾಗಿ ಕಾರ್ಯಕರ್ತರು ಹಾಗೂ ಮುಖಂಡರುಗಳು ಕೆಲಸ ಮಾಡಬೇಕು. ಚಳ್ಳಕೆರೆ ಕ್ಷೇತ್ರಕ್ಕೆ ರವೀಶ್ ಹಾಗೂ ಹೊಳಲ್ಕೆರೆಗೆ ತಿಪ್ಪೇಸ್ವಾಮಿ ಇವರುಗಳನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಲಾಗಿದೆ. ಇನ್ನು ಉಳಿದಂತೆ ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು, ಹೊಸದುರ್ಗಕ್ಕೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ. ಜನತಾಪಕ್ಷದ ಹೆಬ್ಬಾಗಿಲಿನಂತಿರುವ ಹಿರಿಯೂರು ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸುವ ಸಂಬಂಧ ಕುಮಾರಣ್ಣನವರು ಆರು ಸಾರಿ ಸಭೆ ನಡೆಸಿದ್ದಾರೆ. ಇದೇ ತಿಂಗಳ 24 ಇಲ್ಲವೆ 25 ರೊಳಗೆ ಅಭ್ಯರ್ಥಿಗಳನ್ನು ಘೋಷಿಸುವಂತೆ ಕೇಳಿಕೊಂಡಿದ್ದೇನೆ. ಕಾಂಗ್ರೆಸ್‍ನಿಂದ ಯಾರು, ಬಿಜೆಪಿ.ಯಿಂದ ಯಾರು ಅಭ್ಯರ್ಥಿಗಳಾಗುತ್ತಾರೆಂದು ಕಾಯುತ್ತ ಕುಳಿತರ ಆಗಲ್ಲ. ನಲವತ್ತು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ್ದೇನೆ. ರಾಷ್ಟ್ರೀಯ ಪಕ್ಷಗಳನ್ನು ಸೋಲಿಸುವ ತಂತ್ರಗಾರಿಕೆ ಮಾಡುವಲ್ಲಿ ಯಶಸ್ವಿಯಾಗುತ್ತೇವೆಂಬ ನಂಬಿಕೆಯಿದೆ. ಇಂತಹವರಿಗೆ ಟಿಕೇಟ್ ಕೊಡಿ ಎಂದು ವರಿಷ್ಠರುಗಳಿಗೆ ಶಿಫಾರಸ್ಸು ಮಾಡುವ ಸಣ್ಣತನದ ರಾಜಕಾರಣಿ ನಾನಲ್ಲ ಎಂದು ಸಮಾಲೋಚನಾ ಸಭೆಯಲ್ಲಿ ಸ್ಪಷ್ಠಪಡಿಸಿದರು.
ಚುನಾವಣೆ ಸಂಬಂಧ ವರಿಷ್ಠರುಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೇನೆ. ಪಂಚರತ್ನ ರಥಯಾತ್ರೆ ಇನ್ನು ಜಿಲ್ಲೆಗೆ ಆಗಮಿಸಿಲ್ಲ. ವೈಮನಸ್ಸು, ದ್ವಂದ್ವ ನಿಲುವುಗಳು ಬೇಡ. ಮಡಿವಂತಿಕೆ ಬಿಟ್ಟು ಪಕ್ಷದ ಸೇನಾನಿಗಳಂತೆ ಕೆಲಸ ಮಾಡಬೇಕಿದೆ. ಮತ್ತೊಬ್ಬರ ಮನಸ್ಸಿಗೆ ನೋವಾಗದಂತೆ ಸೂಕ್ಷ್ಮವಾಗಿ ನಿಮ್ಮ ಅಭಿಪ್ರಾಯಗಳನ್ನು ಉಸ್ತುವಾರಿ ಮೀನಳ್ಳಿ ತಾಯಣ್ಣರವರಿಗೆ ತಿಳಿಸಿ ಎಂದು ಕಾರ್ಯಕರ್ತರಲ್ಲಿ ಕೋರಿದರು.

Leave a Reply

Your email address will not be published. Required fields are marked *