ರೈತರ ತೋಟಗಳು ಒಣಗಬಾರದೆಂದು ಕೆರೆಗಳನ್ನು ಕಟ್ಟಿಸಿದ್ದೇನೆ: ಶಾಸಕ ಎಂ. ಚಂದ್ರಪ್ಪ

ರಾಜ್ಯ

ಹೊಳಲ್ಕೆರೆ : ರೈತರ ತೋಟಗಳು ಒಣಗಬಾರದೆಂದು ಕೆರೆಗಳನ್ನು ಕಟ್ಟಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಕಂಬದೇವರ ಹಟ್ಟಿ ಗ್ರಾಮದಲ್ಲಿ 1 ಕೋಟಿ 17 ಲಕ್ಷ ರೂ.ವೆಚ್ಚದಲ್ಲಿ ನೂತನ ಕೆರೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ಸಲ್ಲಿಸಿ ನಂತರ ನೂತನ ಶಾಲಾ ಕೊಠಡಿಗಳನ್ನು ಉದ್ಗಾಟಿಸಿ ಮಾತನಾಡಿದರು.
ಕೆರೆ ಕಟ್ಟಿದರೆ ಜಾನುವಾರುಗಳಿಗಷ್ಟೆ ಅಲ್ಲ. ರೈತರ ತೋಟಗಳು ಒಣಗುವುದಿಲ್ಲ ಎನ್ನುವ ಉದ್ದೇಶ ನನ್ನದು. ಮಕ್ಕಳು ಶಾಲೆಗಳಿಗೆ ಹೋಗಿ ಪಾಠ ಕಲಿಯಲು ತೊಂದರೆಯಾಗಬಾರದೆಂದು ಸರ್ಕಾರಿ ಶಾಲೆಗಳಿಗೆ ಉಚಿತ ಬಸ್‍ಗಳ ವ್ಯವಸ್ಥೆ ಕಲ್ಪಿಸಿ ಚಾಲಕ, ಕಂಡಕ್ಟರ್‍ಗೆ ಸ್ವಂತ ಖರ್ಚಿನಿಂದ ವೇತನ ನೀಡುತ್ತಿದ್ದೇನೆ. ರಾಜ್ಯದಲ್ಲಿ ಯಾವ ಶಾಸಕನು ಇಂತಹ ಸಾರ್ಥಕ ಕೆಲಸ ಮಾಡಿಲ್ಲ. ಕ್ಷೇತ್ರಾದ್ಯಂತ ಯಾರು ಏನೆ ಕೇಳಲಿ, ಬಿಡಲಿ ಎಲ್ಲೆಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಪ್ರಾಮಾಣಿವಾಗಿ ಕೆಲಸ ಮಾಡುತ್ತಿದ್ದೇನೆಂದರು.
ಹೈಟೆಕ್ ಆಸ್ಪತ್ರೆ, ಉತ್ತಮ ಗುಣಮಟ್ಟದ ರಸ್ತೆ, ಶಾಲಾ-ಕಾಲೇಜುಗಳನ್ನು ಕಟ್ಟಿಸಿದ್ದೇನೆ. ಅಧಿಕಾರ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನಕ್ಕೆ ಒಳ್ಳೆಯ ಕೆಲಸ ಮಾಡಬೇಕೆಂದುಕೊಂಡಿರುವ ರಾಜಕಾರಣಿ ನಾನು. ಎಲ್ಲಿಯೂ ಯಾವ ಕೆಲಸವನ್ನು ಬಾಕಿ ಉಳಿಸಿಲ್ಲ. ಹೆಣ್ಣು ಮಕ್ಕಳು ಬೀದಿಗೆ ಬಂದು ನೀರು ಹಿಡಿಯಬಾರದೆಂದು ಹಿರಿಯೂರಿನ ವಾಣಿವಿಲಾಸಸಾಗರದಿಂದ ಶುದ್ದ ಕುಡಿಯುವ ನೀರು ಪೂರೈಸುವ ಕಾಮಗಾರಿ ಶೇ.90 ರಷ್ಟು ಮುಗಿದಿದೆ. ಉಳಿದ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಮನೆ ಮನೆಗೆ ತಲುಪಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ವಿಜಯಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಹ್ಲಾದ್, ರಂಗಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಶರಣಯ್ಯ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

 

Leave a Reply

Your email address will not be published. Required fields are marked *