ಹೆರಿಗೆ ತುರ್ತು ಸಂದರ್ಭ ಎದುರಿಸಲು ಕ್ಷಿಪ್ರ ಕಾರ್ಯಪಡೆ ರಚನೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಚಿತ್ರದುರ್ಗ:ಹೆರಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಕೈಗಳು ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ತಜ್ಞ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕ್ಷಿಪ್ರ ಕಾರ್ಯ ಪಡೆ ತಂಡ ರಚನೆ ಮಾಡಬೇಕು. ಈ ತಂಡ 24*7 ಚಿಕೆತ್ಸೆಗೆ ಲಭ್ಯವಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಆರೋಗ್ಯ ಮಿಷನ್ ಸಭೆಯಲ್ಲಿ ಮಾತಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯ ಸರಾಸರಿಗಿಂತಲೂ ಹೆಚ್ಚಿಗೆ ತಾಯಿ ಹಾಗೂ ಶಿಶು ಮರಣ ಪ್ರಮಾಣವಿದೆ. ಇದನ್ನು ತಗ್ಗಿಸಬೇಕು. ಜಿಲ್ಲಾ ಆಸ್ಪತ್ರೆಯ ಆಡಳಿತವನ್ನು ಸುಧಾರಿಸಿ, ಎಲ್ಲಾ ವಿಭಾಗಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಹೆರಿಯ ತುರ್ತು ಸಂದರ್ಭದಲ್ಲಿ ರಕ್ತ ನಿಧಿ ಕೇಂದ್ರಗಳು ಹಣ ಹಾಗೂ ಬದಲಿ ರಕ್ತ ನೀಡಲು ಒತ್ತಾಯ ಮಾಡಬಾರದು. ತಾಯಿಂದರ ಮರಣಕ್ಕೆ ರಕ್ತದ ಅಲಭ್ಯತೆ ಕಾರಣವಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ವೈದ್ಯರು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ತಾಯಿ ಹಾಗೂ ಶಿಶು ಮರಣಗಳು ಜಿಲ್ಲೆಯಲ್ಲಿ ಮರುಕಳಿಸಬಾರದು. ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರ ಸ್ಥಿತಿ ತೀರಾ ಚಿಂತಾಜನಕ ಎನಿಸಿದಾಗ ಇತರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಇದರಿಂದ ಚಿತ್ಸೆಯ ಸುರ್ವಣ ಗಳಿಗೆ ತಪ್ಪಿ ಹೋಗಿ ಗರ್ಭಿಣಿ ತಾಯಂದಿರು ಮರಣ ಹೊಂದುವ ಪರಿಸ್ಥಿತಿ ಎದುರಾಗುತ್ತದೆ. ಇದರ ಬದಲಿಗೆ ಪರಿಸ್ಥಿತಿ ಅವಲೋಕಿಸಿ ಮುಂಚಿತವಾಗಿ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಬೇಕು. ಹೀಗೆ ಶಿಫಾರಸ್ಸು ಮಾಡುವ ಗರ್ಭಿಣಿಯರನ್ನು ಕೊಂಡೊಯ್ಯಲು ಪ್ರತ್ಯೇಕ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಜಿಲ್ಲಾ ಆಸ್ಪತ್ರೆಯಿಂದಲೇ ಮಾಡಬೇಕು. ಆಂಬ್ಯುಲೆನ್ಸ್ನಲ್ಲಿ ಎಲ್ಲಾ ಜೀವ ರಕ್ಷಕ ಸಾಧನಗಳೊಂದಿಗೆ ವೈದ್ಯರು ಸಹ ಗರ್ಭಿಣಿಯರೊಂದಿಗೆ ತೆರಳಬೇಕೆಂದು ನಿರ್ದೇಶನ ನೀಡಿದರು.
ನಿರ್ಲಕ್ಷ್ಯ ದಿಂದ ತಾಯಿ ಮರಣ ಉಂಟಾದರೆ ಸಂಬಂಧಪಟ್ಟವರ ವಿರುದ್ದ ಎ.ಎಫ್.ಐ.ಆರ್ ದಾಖಲಸಿ ಕ್ರಿಮಿನಲ್ ಮುಕದ್ದಮೆ ಹೂಡಿ ಕಠಣ ಕ್ರಮ ಕೈಗೊಳ್ಳಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟಂಬರ್ವರೆಗೆ 8934 ಹೆರಿಗೆ ಮಾಡಿಸಲಾಗಿದೆ. ಇದರಲ್ಲಿ 5975 ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಆಗಿವೆ. 2956 ಖಾಸಗಿ ಆಸ್ಪತ್ರೆಯಲ್ಲಿಯಾಗಿವೆ. ಶೇ.100 ರಷ್ಟು ಸಾಂಸ್ಥಿಕ ಹೆರಿಗಳನ್ನು ಮಾಡಲಾಗಿದೆ. ಒಟ್ಟು 7 ತಾಯಂದಿರ ಮರಣ ಸಂಭವಿಸಿದೆ. ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಪ್ರತಿ ಲಕ್ಷ ಜನಸಂಖ್ಯೆಗೆ 78.85 ಇದೆ. ಶಿಶು ಮರಣ ಪ್ರಮಾಣ ಪ್ರತಿ ಸಾವಿರ ಶಿಶುಗಳಿಗೆ 13 ಇದೆ. 3060 ಲ್ಯಾಪ್ಕ್ರೋಸ್ಕೋಫಿ ಹಾಗೂ 7 ವ್ಯಾಸೋಕ್ಟಮಿ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಸೇರಿದಂತೆ ಆರೋಗ್ಯ ಹಿರಿಯ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಉಪಸ್ಥಿತರಿದ್ದರು.