ಜನ‌ ವಿರೋಧಿ ಬಿಜೆಪಿ‌ ಕಿತ್ತೊಗೆಯಲು ಪಣ ತೊಡಬೇಕು

ರಾಜ್ಯ

ದೇಶದ ಭವಿಷ್ಯ ಯುವಕರ ಕೈಲಿ
ಜನವಿರೋಧಿ ಬಿಜೆಪಿ ಕಿತ್ತೊಗೆಯಲು ಪಣ ತೊಡಬೇಕು
ಮಾಜಿ ಸಚಿವ ಎಚ್.ಆಂಜನೇಯ ಕರೆ

 

 

ಹೊಳಲ್ಕೆರೆಯಲ್ಲಿ ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ಕೆ ಚಾಲನೆ
ಜನವಿರೋಧಿ ಆಡಳಿತದಲ್ಲಿ ತೊಡಗಿರುವ ಬಿಜೆಪಿ ಸರ್ಕಾರದ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದ್ದು, ಯುವ ಪೀಳಿಗೆ ಈ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಡಬೇಕು ಎಂದು ಮಾಜಿ ಸಚಿವ ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಕರೆ ನೀಡಿದರು.
ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಸಂಜೆ ಬ್ಲಾಕ್ ಯುವ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಭವಿಷ್ಯ ರೂಪಿಸುವಲ್ಲಿ ಯುವ ಪೀಳಿಗೆ ಅತ್ಯಂತ ಪ್ರಮುಖ ಪಾತ್ರವಹಿಸಬೇಕು ಎಂಬ ದೃಷ್ಟಿಯಿಂದ ರಾಜೀವ್ ಗಾಂಧಿ ಅವರು, 18 ವರ್ಷದ ಯುವ ಪೀಳಿಗೆಗೆ ಮತದಾನದ ಹಕ್ಕು ನೀಡಿದರು. ಆದರೆ, ಕಾಲಕ್ರಮೇಣ ಯುವಕರನ್ನು ದಾರಿ ತಪ್ಪಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಜಾತಿ, ಧರ್ಮದ ವಿಷ ಬೀಜ ಬಿತ್ತಲಾಗುತ್ತಿದೆ. ಈ ಕುರಿತು ಯುವ ಪೀಳಿಗೆ ಸದಾ ಜಾಗೃತಿ ವಹಿಸಬೇಕು ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುತ್ತದೆ, ಕಪ್ಪು ಹಣ ದೇಶಕ್ಕೆ ತರಲಾಗುತ್ತದೆ, ನವ ಭಾರತ ನಿರ್ಮಾಣ ಮಾಡುತ್ತೇವೆ, ಪ್ರತಿಯೊಬ್ಬರ ಅಕೌಂಟ್‍ಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿ, ನಿರುದ್ಯೋಗ ಹೆಚ್ಚುವಂತೆ ಮಾಡಲಾಗಿದೆ ಎಂದು ದೂರಿದರು.
ಪೆಟ್ರೋಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಬಡವರು, ಮಧ್ಯಮ ಜನರು ಜೀವನ ನಡೆಸುವುದು ಕೂಡ ಕಷ್ಟಕರವಾಗಿದೆ. ಆದರೆ, ಇದೆಲ್ಲವನ್ನು ಮರೆಮಾಚಲು ಜಾತಿ, ಧರ್ಮಗಳ ವಿಷ ಬೀಜ ಬಿತ್ತುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ಕುರಿತು ಯುವ ಪೀಳಿಗೆ ಎಚ್ಚರಿಕೆ ವಹಿಸದಿದ್ದರೆ ದೇಶ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಅಗರ್ಭ ಶ್ರೀಮಂತ ಮೋತಿಲಾಲ್ ನೆಹರು ಕುಟುಂಬದ ಜವಾಹಾರ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಶ್ರೀಮಂತಿಕೆಯನ್ನೇ ತ್ಯಾಗ ಮಾಡಿ ದೇಶವನ್ನು ಬಲಿಷ್ಠವಾಗಿ ಕಟ್ಟಿದರು. ಸಾಮಾನ್ಯ ಜನರೊಂದಿಗೆ ಬೆರೆತು ಪಕ್ಷ ಹಾಗೂ ದೇಶದ ಹಿತಕ್ಕೆ ಹೋರಾಟ ನಡೆಸಿದರು. ಇದೇ ಹಾದಿಯಲ್ಲಿ ರಾಷ್ಟ್ರನಾಯಕ, ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು 3,570 ಕಿಮೀ ಕಾಲ್ನಡಿಗೆ ಪಾದಯಾತ್ರೆಯನ್ನು ಕೈಗೊಂಡಿದ್ದು, ಇದು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ.
ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರಚಿಸಿದ ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಜತೆಗೆ ಜನರಲ್ಲಿ ಸೌಹಾರ್ದತೆ, ಸಾಮರಸ್ಯ ಮೂಡಿಸಲು ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಆರು ದಿನಗಳ ಕಾಲ ಸಾಗಲಿದ್ದು, ಈ ವೇಳೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಎಐಸಿಸಿ ಯುವ ಘಟಕದ ಕಾರ್ಯದರ್ಶಿ ಏಜಾಸ್ ಅಹ್ಮದ್ ಖಾನ್ ಮಾತನಾಡಿ, ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ನೇತಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದರೆ, ಈ ಇತಿಹಾಸ ತಿರುಚುವ ವಿಕೃತ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ ಎಂದು ದೂರಿದರು.
ದೇಶದ ಅಭಿವೃದ್ಧಿ ಹಾಗೂ ಉತ್ತಮ ಸರ್ಕಾರ ಚುನಾಯಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕನಿಷ್ಠ 10 ಮಂದಿ ಎಲ್ಲ ಜಾತಿಯ ಯುವಕರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ತಿಳಿಸಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಧ್ಯಾ ಪವಿತ್ರಾ ಮಾತನಾಡಿ, ಕಾಂಗ್ರೆಸ್ ಪಕ್ಷ ಇಲ್ಲದಿದ್ದರೆ ದೇಶದಲ್ಲಿ ಮಹಿಳೆಯರ ಸ್ಥಿತಿ ಶೋಚನಿಯವಾಗಿರುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದ ನೇತಾರರು ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33 ಮೀಸಲಾತಿ ಜಾರಿಗೊಳಿಸುವ ಮೂಲಕ ಮುಖ್ಯವಾಹಿನಿಗೆ ಬರುವಂತ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.
ಯುವ ಹಾಗೂ ಮಹಿಳೆಯರು ಪ್ರತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಈ ವರ್ಗದ ಸಂಘಟನೆ ಪಕ್ಷದ ಕಾರ್ಯಕರ್ತರು ಹೆಚ್ಚು ಗಮನಹರಿಸಬೇಕು. ಇಂದಿರಾಗಾಂಧಿ, ರಾಜೀವ್ ಗಾಂಧಿ ಆಡಳಿತದಲ್ಲಿ ಮಹಿಳೆಯರಿಗೆ ನೀಡಿದ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಮಾಜಿ ಉಪಾಧ್ಯಕ್ಷ ಮಾಯಣ್ಣ, ಜಿಪಂ ಮಾಜಿ ಸದಸ್ಯರಾದ ಗಂಗಾಧರ್ ತಾಳಿಕಟ್ಟೆ, ಲೋಹಿತ್ ಕುಮಾರ್, ಎಚ್.ಡಿ.ಪುರ ಗ್ರಾಪಂ ಸದಸ್ಯ ಅಜ್ಜಪ್ಪ, ಯಾತ್ರೆ ಸಮನ್ವಯಾಧಿಕಾರ ಲೋಕೇಶ್ ನಾಯ್ಕ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್, ನಾಗಭೂಷಣ್ ರೆಡ್ಡಿ, ಜಿಲ್ಲಾಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಉಪಾಧ್ಯಕ್ಷ ವಾಸೀಂ, ಮಾಜಿ ಅಧ್ಯಕ್ಷ ಮಧುಪಾಲೇಗೌಡ, ಹೊಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷ ಎಚ್.ಕೆ.ರಂಗಸ್ವಾಮಿ, ಮುಬಾರಕ್ ಅಲಿ, ಕುಮಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *