ಬೆಂಗಳೂರಿನ ವಿದ್ಯಾರ್ಥಿಗಳಿಗಾಗಿ ಎಜುಕೇಶನ್ ಇನ್ ಐರ್ಲೆಂಡ್‍ನಿಂದ ರೋಡ್‍ಶೋ

ರಾಜ್ಯ

ಬೆಂಗಳೂರಿನ ವಿದ್ಯಾರ್ಥಿಗಳಿಗಾಗಿ ಎಜುಕೇಶನ್ ಇನ್ ಐರ್ಲೆಂಡ್‍ನಿಂದ ರೋಡ್‍ಶೋ

ಬೆಂಗಳೂರು:  ಕೆಲವು ವರ್ಷಗಳಿಂದ ಐರ್ಲೆಂಡ್ ಭಾರತೀಯ ವಿದ್ಯಾರ್ಥಿಗಳನ್ನು ಸ್ವಾಗತಿಸುವಲ್ಲಿ ಮುಂಚೂಣಿಯಲ್ಲಿದೆ ಮತ್ತು ಕ್ರಮೇಣ ವಿದೇಶದಲ್ಲಿ ಆದ್ಯತೆಯ ಅಧ್ಯಯನ ತಾಣವಾಗಿ ಹೊರಹೊಮ್ಮಿದೆ. ಐರ್ಲೆಂಡ್‍ನಲ್ಲಿ ಉನ್ನತ ಶಿಕ್ಷಣದ ಆಯ್ಕೆಗಳ ಕುರಿತು ಮತ್ತಷ್ಟು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹಾಗೂ ಅವುಗಳನ್ನು ಸರಿಯಾದ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಐರ್ಲೆಂಡ್‍ನ ಎಜುಕೇಶನ್ ಇನ್ ಐರ್ಲೆಂಡ್ ಸಂಸ್ಥೆಯು ಐರಿಶ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಕೆಲವು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ `ಪದವಿ ಪ್ರದರ್ಶನ’ವನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಈ ಪ್ರದರ್ಶನದ ಪ್ರಮುಖ ಉದ್ದೇಶ ಐರ್ಲೆಂಡ್‍ನಲ್ಲಿರುವ ಶಿಕ್ಷಣ ಸಂಸ್ಥೆಗಳ ಶಿಕ್ಷಣದ ಗುಣಮಟ್ಟ ಸೇರಿದಂತೆ ಇನ್ನಿತರೆ ಅಂಶಗಳ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದಾಗಿದೆ.

 

 

ಈ `ಅಂಡರ್‍ಗ್ರಾಜುಯೇಟ್ ಶೋಕೇಸ್’ ಬೆಂಗಳೂರಿನಲ್ಲಿ ಆಗಸ್ಟ್ 22 ರಂದು ಆರಂಭವಾಗಿದೆ. ರೋಡ್‍ಶೋ ಭಾಗವಾಗಿ ಎಜುಕೇಶನ್ ಇನ್ ಐರ್ಲೆಂಡ್, ಐರಿಶ್ ಶಿಕ್ಷಣ ಸಂಸ್ಥೆಗಳು ಮತ್ತು ಟಾಪ್ ರ್ಯಾಂಕ್‍ನಲ್ಲಿರುವ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಮೊದಲ ದಿನ ಇಂಟರ್‍ನ್ಯಾಷನಲ್ ಸ್ಕೂಲ್ ಆಫ್ ಬೆಂಗಳೂರು ಮತ್ತು ಕ್ಯಾಂಡರ್ ಇಂಟರ್‍ನ್ಯಾಷನಲ್ ಸ್ಕೂಲ್‍ಗೆ ಭೇಟಿ ನೀಡಿದರು. ಆಗಸ್ಟ್ 23 ರಂದು ಈ ಪ್ರತಿನಿಧಿಗಳು ಎಬೇನೇಜರ್ ಇಂಟರ್‍ನ್ಯಾಷನಲ್ ಸ್ಕೂಲ್, ಸ್ಟೋನ್‍ಹಿಲ್ ಇಂಟರ್‍ನ್ಯಾಷನಲ್ ಸ್ಕೂಲ್‍ಗೆ ಭೇಟಿ ನೀಡಿ ತಮ್ಮ ದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಈ ಪ್ರತಿನಿಧಿಗಳು ಸಂವಾದ ನಡೆಸಿ ಐರ್ಲೆಂಡ್‍ನ ಶಿಕ್ಷಣ ಪದ್ಧತಿ, ಅಲ್ಲಿ ದೊರೆಯುತ್ತಿರುವ ಸೌಲಭ್ಯಗಳು ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ನೀಡಿದರು.

ಎಜುಕೇಶನ್ ಇನ್ ಐರ್ಲೆಂಡ್‍ನ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ವ್ಯವಸ್ಥಾಪಕ ಬ್ಯಾರಿ ಒಡ್ರಿಸ್ಕೋಲ್ ಅವರು ಮಾತನಾಡಿ, “ಅತ್ಯುತ್ತಮ ಮತ್ತು ಉನ್ನತ ಶಿಕ್ಷಣ ನೀಡಲು ಮತ್ತು ತನ್ನ ಪದವೀಧರರನ್ನು ಭವಿಷ್ಯಕ್ಕೆ ಸಿದ್ಧರಾಗುವಂತೆ ಮಾಡಲು ಐರ್ಲೆಂಡ್ ಬದ್ಧವಾಗಿದೆ. ಪ್ರತಿ ವರ್ಷ ಶೇ.10 ರ ಪ್ರಮಾಣದಲ್ಲಿ ಐರ್ಲೆಂಡ್‍ನಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಜಿ ಸಲ್ಲಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ವಿದ್ಯಾರ್ಥಿಗಳಿಗೆ ಅವರು ಅನ್ವೇಷಿಸಬಹುದಾದ ಅವಕಾಶಗಳ ಬಗ್ಗೆ ಶಿಕ್ಷಣ ನೀಡುವುದು ಮತ್ತು ಉದ್ಯೋಗ ನಿರೀಕ್ಷೆಗಳೊಂದಿಗೆ ಸರಿಯಾದ ಕೋರ್ಸ್‍ಗಳನ್ನು ಕಂಡುಕೊಳ್ಳುವುದು ಈ ನಮ್ಮ ಪ್ರದರ್ಶನದ ಪ್ರಮುಖ ಕಾರ್ಯಸೂಚಿಯಾಗಿದೆ. ಈ ನಮ್ಮ ಅಂಡರ್‍ಗ್ರಾಜುಯೇಟ್ ಶೋಕೇಸ್ ವಿದ್ಯಾರ್ಥಿಗಳಿಗೆ ಐರಿಶ್ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಐರ್ಲೆಂಡ್‍ನಲ್ಲಿರುವ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾಹಿತಿಗಳನ್ನು ಪಡೆಯಲು ಸಹಾಯ ಮಾಡಿದೆ” ಎಂದರು.

ಬೆಂಗಳೂರಿನಲ್ಲಿರುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಧ್ಯಯನ ನಡೆಸುವ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡುವ ನಿಟ್ಟಿನಲ್ಲಿ ಎಜುಕೇಶನ್ ಇನ್ ಐರ್ಲೆಂಡ್ ಸಂಸ್ಥೆಯು ಈ ಪ್ರದರ್ಶನವನ್ನು ಆಯೋಜಿಸಿತ್ತು. ಈ ರೋಡ್‍ಶೋನ ಪ್ರಮುಖ ಉದ್ದೇಶವೆಂದರೆ ವಿದ್ಯಾರ್ಥಿಗಳಿಗೆ ವಿಶೇಷ ಕೋರ್ಸ್‍ಗಳನ್ನು ನೀಡುವುದಾಗಿದೆ. ಈ ಮೂಲಕ ಅವರ ಪರಿಣತಿಯನ್ನು ಗುರುತಿಸಲು ಇದು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ನಿರ್ಣಾಯಕ ಒಳನೋಟಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಅಲ್ಲದೇ, ಐರ್ಲೆಂಡ್‍ನ ಉನ್ನತ ಶಿಕ್ಷಣದ ಬಗ್ಗೆ ಅಗತ್ಯ ಮಾಹಿತಿಗಳನ್ನೂ ನೀಡಲಾಯಿತು. ಪರಿಣತರೊಂದಿಗೆ ನಡೆದ ಸಂವಾದದ ನಂತರ ಅಧಿಕಾರಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಿತು. ಈ ಮೂಲಕ ಐರ್ಲೆಂಡ್‍ನಲ್ಲಿ ಅಧ್ಯಯನ ಮಾಡುವ ಕುರಿತು ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ನೀಡಲಾಯಿತು.

Leave a Reply

Your email address will not be published. Required fields are marked *