ಶುದ್ಧ ಕುಡಿವ ನೀರಿನ ಘಟಕದಿಂದ ಕ್ಲೋರಿನ್ ಸೋರಿಕೆ: 50 ಜನರು ಅಸ್ವಸ್ಥ

ರಾಜ್ಯ

ಹೊಸದುರ್ಗ ದ ಎಪಿಎಂಸಿ ಎದುರಿರುವ ಮಿಡಲ್ ಪಂಪ್ ಹೌಸ್ ನ, ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಸೋರಿಕೆಯಾದ ಪರಿಣಾಮ 50 ಜನ ಉಸಿರಾಟದ ಸಮಸ್ಯೆಯಿಂದಾಗಿ ಹೊಸದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
4 ರಿಂದ 5 ಜನರಿಗೆ ವಾಂತಿಯಾಗಿದ್ದು, ಅಸ್ವಸ್ಥರಾಗಿದ್ದಾರೆ.ಕೂಡಲೇ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ವೃತ್ತ ನಿರೀಕ್ಷಕ, ಅಗ್ನಿಶಾಮಕ ದಳದವರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಘಟನಾ ಸ್ಥಳಕ್ಕೆ ಜನರು ಬಾರದಂತೆ ಎಚ್ಚರ ವಹಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದ ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲಾಗಿದೆ.

 

 

ಸಂಜೆ 6 ಗಂಟೆ ಆಸುಪಾಸಿನಲ್ಲಿ ಕ್ಲೋರಿನ್ ಸೋರಿಕೆಯಾಗಿದೆ. ನೀರು ಶುದ್ಧೀಕರಣ ಘಟಕ, ಹಿರಿಯೂರಿನ ನೀರು ಸರಬರಾಜು ಇಲಾಖೆಗೆ ಸೇರಿದ್ದು, ಮೊದಲು ಇಲ್ಲಿಂದ ನೀರು ಪಡೆಯಲಾಗುತ್ತಿತ್ತು. ಕೆಲ್ಲೋಡು ಬಳಿ ಪಂಪ್ ಹೌಸ್ ನಿರ್ಮಿಸಿದ ನಂತರ, ಇದರ ಬಳಕೆ ನಿಂತಿದೆ. ಕಳೆದ 7 ರಿಂದ 8 ವರ್ಷಗಳಿಂದಲೂ ಬಳಕೆಯಾಗುತ್ತಿಲ್ಲ. ಕ್ಲೋರಿನ್ ಸೋಮವಾರ ಏಕಾಏಕಿ ಸೋರಿಕೆಯಾಗಿದೆ.ಅನಿಲ ಸೋರಿಕೆ ಸುಮಾರು 1 ಕಿ.ಮೀ ವರೆಗೂ ಹರಡಿದೆ. ತಜ್ಞರ ತಂಡದೊಂದಿಗೆ ಸ್ಥಳಕ್ಕೆ ತೆರಳಿ, ನೀರಿನಲ್ಲಿ ಕ್ಲೋರಿನ್ ವೀಲಿನಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಮಾಹಿತಿ ನೀಡಿದರು.ಅಧಿಕಾರಿಗಳ ತಂಡದ ಪರಿಶ್ರಮದಿಂದಾಗಿ ರಾತ್ರಿ 8 ಗಂಟೆಯ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಸಮಸ್ಯೆ ಆದ ನಂತರ ಪರಿಹರಿಸುವುದಕ್ಕಿಂತ, ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *