ದೇಶದಲ್ಲಿಯೇ ಅತ್ಯುತ್ತಮ ಮತ್ತು ಜೀವಪರ ಬಜೆಟ್: ಮಾಜಿ ಸಚಿವ ಹೆಚ್ ಆಂಜನೇಯ

ರಾಜ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡು ಕಂಡ ಖ್ಯಾತ ಆರ್ಥಿಕ ತಜ್ಞ ಎಂಬುದನ್ನು ತಾವು ಮಂಡಿಸುತ್ತಿರುವ ಪ್ರತಿ ಬಜೆಟ್‍ಲ್ಲೂ ದೃಢಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.

ಕುರಿ ಕಾಯುವ ಸಮುದಾಯದ ವ್ಯಕ್ತಿ ಹಣಕಾಸು ಮಂತ್ರಿಯಾದ ಸಂದರ್ಭದಲ್ಲಿ ಅನೇಕ ಟೀಕೆ-ಟಿಪ್ಪಣಿಗಳು ಎದುರುಗೊಂಡಿದ್ದವು. ಆದರೆ, ಎಲ್ಲ ಲೆಕ್ಕಾಚಾರವನ್ನು ಉಲ್ಟಾ ಮಾಡಿ ನಾಡಿನ ಅಭಿವೃದ್ಧಿಗೆ ಪಕ್ಕಾ ಲೆಕ್ಕಾಚಾರದಲ್ಲಿ 15 ಬಜೆಟ್‍ಗಳನ್ನು ಮಂಡಿಸಿ ದೇಶದ ಶ್ರೇಷ್ಠ ಆರ್ಥಿಕ ತಜ್ಞ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

 

 

ಈ ಬಾರಿಯ ಬಜೆಟ್ ಸವಾಲು ಆಗಿತ್ತು. ಒಂದೆಡೆ ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಂತರ ಹಣ ಹೊಂದಿಸುವುದು, ಮತ್ತೊಂದು ಕಡೆ ವಿವಿಧ ಕ್ಷೇತ್ರಗಳಿಗೆ ಅನುದಾನ ಹಂಚಿಕೆ. ಆದರೆ, ಸಿದ್ದರಾಮಯ್ಯ ಅವರು ಈ ಎಲ್ಲ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರಷ್ಟೇ ಅಲ್ಲದೆ, ಈ ಹಿಂದೆ ಎಲ್ಲ ಹಣಕಾಸು ಮಂತ್ರಿಗಳಷ್ಟೇ ಅಲ್ಲದೇ ತಾವೇ ಮಂಡಿಸಿದ ಬಜೆಟ್‍ಗಿಂತ ಶ್ರೇಷ್ಠ, ಅತ್ಯುತ್ತಮ ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ ಎಂದು ಎಚ್.ಆಂಜನೇಯ ಬಣ್ಣಿಸಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ; ಸಿದ್ದರಾಮಯ್ಯ ಕೈ ಹಿಡಿಯದ ಕ್ಷೇತ್ರವಿಲ್ಲ ಎಂಬ ರೀತಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಸಂಘ, ಶಿಕ್ಷಣ, ಆರೋಗ್ಯ, ಹೀಗೆ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಜತೆಗೆ ಬಡ, ಮಧ್ಯಮ ಜನರಿಗೆ ವರದಾನ ಆಗಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟಿರುವುದು ಅರ್ಥಶಾಸ್ತ್ರಜ್ಞರೇ ಅಚ್ಚರಿ ಪಡುವಂತದ್ದಾಗಿದೆ.ಡಿಸಿಸಿ ಬ್ಯಾಂಕ್, ಪಿಕಾರ್ಡ್‍ಗಳಲ್ಲಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿರುವುದು ದಿಟ್ಟ ನಡೆ ಆಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ಮೆಡಿಕಲ್ ಕಾಲೇಜ್ ಆರಂಭ ಮತ್ತು ಅಭಿವೃದ್ಧಿಗೆ 500 ಕೋಟಿ ರೂಪಾಯಿ ಮೀಸಲಿಟ್ಟಿರುವುದು ನಿಜಕ್ಕೂ ಬಯಲುಸೀಮೆ ಜನರ ಮೇಲೆ ತಮಗೆ ಇರುವ ವಿಶೇಷ ಪ್ರೀತಿಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಇದೊಂದು ದೇಶದಲ್ಲಿಯೇ ಅತ್ಯುತ್ತಮ ಮತ್ತು ಜೀವಪರ ಬಜೆಟ್ ಎನ್ನಬಹುದು ಎಂದು ಎಚ್.ಆಂಜನೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *