ಲೋಕಸಭಾ ಚುನಾವಣೆ ; 4ರಂದು ಮತ ಎಣಿಕೆಗೆ ಸಕಲ ಸಿದ್ಧತೆ : ಟಿ.ವೆಂಕಟೇಶ್

ರಾಜ್ಯ

ಲೋಕಸಭಾ ಚುನಾವಣೆ ; 4ರಂದು ಮತ ಎಣಿಕೆಗೆ ಸಕಲ ಸಿದ್ಧತೆ : ಟಿ.ವೆಂಕಟೇಶ್

 

 

ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಜೂ. 04ರಂದು ಬೆಳಿಗ್ಗೆ 7ರಿಂದ ನಗರದ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಈ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಮತಎಣಿಕೆ ಸಿದ್ಧತೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಮತಗಟ್ಟೆಗಳನ್ನು ದಾಸ್ತಾನು ಮಾಡಿರುವ ಕಟ್ಟಡದ ಮೇಲುಸ್ತುವಾರಿಗಾಗಿ ಓರ್ವ ಪತ್ರಾಂಕಿತ ಹುದ್ದೆಯ ಅಧಿಕಾರಿಯನ್ನು ದಿನದ 24ಗಂಟೆಯ ಅವಧಿಗೆ ನಿಯೋಜಿಸಲಾಗಿದೆ ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವೂ ಕೂಡ ಖುದ್ದಾಗಿ ಭೇಟಿ ನೀಡಿ ಭದ್ರತಾ ಕೊಠಡಿಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ ಉಮೇದುವಾರರಲ್ಲದೇ ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಕೂಡ ಭದ್ರತಾ ಕೊಠಡಿಯನ್ನು ಭೇಟಿ ನೀಡಲು ಅವಕಾಶ ನೀಡಲಾಗಿತ್ತು ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತಎಣಿಕೆ ನಡೆಯಲಿದೆ. ಉಮೇದುವಾರರು ಮತ ಎಣಿಕೆ ಕಾರ್ಯಕ್ಕೆ ಸುಮಾರು 125 ಮಂದಿ ಏಜೆಂಟರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಏಜೆಂಟರುಗಳು ಪೆನ್ನು ಮತ್ತು ಬಿಳಿ ಹಾಳೆಯ ಹೊರತಾಗಿ ಮೊಬೈಲ್ ಸೇರಿದಂತೆ ಬೇರೆ ಯಾವುದೇ ರೀತಿಯ ವಿದ್ಯುನ್ಮಾನ ಯಂತ್ರಗಳು, ನೀರಿನ ಬಾಟಲಿ, ಇನ್ನಿತರ ವಸ್ತುಗಳು, ಮುಂತಾದವು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಏಜೆಂಟರು ತಮಗೆ ನಿಗಧಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗಧಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುವುದನ್ನು ನಿಷೇಧಿಸಲಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14ಟೇಬಲ್‍ಗಳನ್ನು ಹಾಗೂ ಅಂಚೆ ಮತಪತ್ರಗಳ ಎಣಿಕೆಗೆ ಒಟ್ಟು 12ಟೇಬಲ್‍ಗಳನ್ನು ನಿಗಧಿಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆದು ಬೆಳಿಗ್ಗೆ 8ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತ ಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260ಮತಗಟ್ಟೆಗಳ ಎಣಿಕೆಯು 19ಸುತ್ತುಗಳಲ್ಲಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರದ 287ಮತಗಟ್ಟೆಗಳ ಎಣಿಕೆಯು 21ಸುತ್ತುಗಳಲ್ಲಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242ಮತಗಟ್ಟೆಗಳ ಎಣಿಕೆಯು 18ಸುತ್ತುಗಳಲ್ಲಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299ಮತಗಟ್ಟೆಗಳ ಎಣಿಕೆಯು 22ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267ಮತಗಟ್ಟೆಗಳ ಎಣಿಕೆಯು 20ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳ ಎಣಿಕೆಯು 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದ್ದು, ತ್ವರಿತಗತಿಯಲ್ಲಿ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅಲ್ಲದೇ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಟೇಬಲ್‍ಗೆ ಒಟ್ಟು ಎಣಿಕೆ ಸಹಾಯಕರು, ಎಣಿಕೆ ಮೇಲ್ವಿಚಾರಕರು ಸೇರಿದಂತೆ ಮೈಕ್ರೋ ಆಬ್ಜರ್ವರ್ ಸೇರಿದಂತೆ ಮೂರು ಜನರ ತಂಡವನ್ನು ನಿಯೋಜಿಸಲಾಗುವುದು. ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಭಂಧಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.
ಮತ ಎಣಿಕೆ ದಿನದಂದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲ್ಲದೇ ಜೂ 01ರಿಂದ 04ರ ಸಂಜೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಅಂದು ನಗರದಲ್ಲಿ ಯಾವುದೇ ಅಭ್ಯರ್ಥಿಗಳು ವಿಜಯೋತ್ಸವ, ಸಭೆ-ಸಮಾರಂಭಗಳನ್ನು ನಡೆಸದಂತೆ ಸೂಚಿಸಲಾಗಿದೆ ಎಂದರು.

ವಿಧಾನ ಪರಿಷತ್ ಚುನಾವಣೆ ;
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಜೂ 03ರಂದು ಬೆಳಿಗ್ಗೆ 08ಗಂಟೆಯಿಂದ ಸಂಜೆ 4ಗಂಟೆಯವರೆಗೆ ನಡೆಯಲಿದೆ. ಈ ಚುನಾವಣೆಗೆ ಚಿತ್ರದುರ್ಗ ಜಿಲ್ಲಾ ಕೇಂದ್ರದದಲ್ಲಿ 02ಮತಗಟ್ಟೆಗಳನ್ನು ಹಾಗೂ ಉಳಿದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಲಾ 01 ಮತಗಟ್ಟೆ ಸೇರಿದಂತೆ ಒಟ್ಟು 07 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು. ಮೊಳಕಾಲ್ಮೂರು ತಾಲೂಕಿನಲ್ಲಿ 222ಪುರುಷರು ಹಾಗೂ 46ಮಹಿಳೆಯರು ಸೇರಿದಂತೆ ಒಟ್ಟು 268ಮತದಾರರು, ಚಳ್ಳಕೆರೆ ತಾಲೂಕಿನಲ್ಲಿ 754 ಪುರುಷರು ಮತ್ತು 265ಮಹಿಳೆಯರು ಸೇರಿದಂತೆ ಒಟ್ಟು 1019ಮತದಾರರು ಚಿತ್ರದುರ್ಗ ತಾಲೂಕಿನ ಮತದಾರರಿಗಾಗಿ ನಗರದ ಸರ್ಕಾರಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ 01ರಲ್ಲಿ 489ಪುರುಷರು ಮತ್ತು 292 ಮಹಿಳೆಯರು ಸೇರಿ ಒಟ್ಟು 781ಮತದಾರರು ಹಾಗೂ ಕೊಠಡಿ ಸಂಖ್ಯೆ 02ರಲ್ಲಿ 501 ಪುರುಷರು ಮತ್ತು 322ಮಹಿಳೆಯರು ಸೇರಿದಂತೆ ಒಟ್ಟು 823ಮತದಾರರು, ಹಿರಿಯೂರು ತಾಲೂಕಿನಲ್ಲಿ 601ಪುರುಷರು ಮತ್ತು 264ಮಹಿಳೆಯರು ಸೇರಿದಂತೆ ಒಟ್ಟು 865ಮತದಾರರು, ಹೊಸದುರ್ಗ ತಾಲೂಕಿನಲ್ಲಿ 508 ಪುರುಷರು ಮತ್ತು 172ಮಹಿಳೆಯರು ಸೇರಿದಂತೆ ಒಟ್ಟು 680ಮತದಾರರು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 367 ಪುರುಷರು ಮತ್ತು 110ಮಹಿಳೆಯರು ಸೇರಿದಂತೆ ಒಟ್ಟು 477ಮತದಾರರು ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ 3442 ಪುರುಷರು ಮತ್ತು 1471 ಮಹಿಳೆಯರು ಸೇರಿದಂತೆ ಒಟ್ಟು 4913ಮತದಾರರು ಮತದಾನ ಮಾಡಲಿದ್ದಾರೆ ಎಂದರು. ಮತದಾರರು ಮತಗಟ್ಟೆಯಲ್ಲಿ ಚುನಾವಣಾ ಆಯೋಗವು ನೀಡುವ ಪೆನ್ನನ್ನು ಬಳಸಿಕೊಂಡು 1, 2 ಮತ್ತು 3 ಆದ್ಯತಾ ಮತಗಳನ್ನು ನೀಡಲು ಅವಕಾಶವಿದೆ ಎಂದರು.
ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಮತ ಚಲಾಯಿಸಲಿರುವ ಅರ್ಹ ಮತದಾರರಿಗೆ ಅಂದು ನಿಯಮಾನುಸಾರ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಆದೇಶಿಸಲಾಗಿದೆ ಎಂದರು.
ಜೂ 02ರಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಜೂನ್ 03ರಂದು ಮತದಾನದ ನಂತರ ನಿಯಮಾನುಸಾರ ಜಿಲ್ಲಾ ಕೇಂದ್ರದಲ್ಲಿ ಡಿಮಸ್ಟರಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿ, ಬೆಂಗಳೂರಿನ ಸರ್ಕಾರಿ ಆರ್ಟ್ಸ್ ಕಾಲೇಜಿಗೆ ರವಾನಿಸಲಾಗುವುದು. ಜೂ 06ರಂದು ಅಲ್ಲಿಯೇ ಮತಎಣಿಕೆ ಕಾರ್ಯ ನಡೆಯಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರು ಮಾತನಾಡಿ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಆಯೋಗದ ನಿಯಮ ಪಾಲಿಸದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *