ಶಿಕ್ಷಣವಿಲ್ಲದ ಸಮುದಾಯ ಮುಂದುವರೆಯಲು ಸಾಧ್ಯವಿಲ್ಲ.

ರಾಜ್ಯ

ಯಾವುದೆ ಒಂದು ಸಮಾಜ ಅಭಿವೃದ್ದಿಯಾಗಬೇಕಾದರೆ ಶೈಕ್ಷಣಿಕ ಜಾಗೃತಿಯಿರಬೇಕು. ಶಿಕ್ಷಣವಿಲ್ಲದ ಸಮುದಾಯ ಮುಂದುವರೆಯಲು ಸಾಧ್ಯವಿಲ್ಲ. ಹಿಂದುಳಿದ ಸಮಾಜದಲ್ಲಿ ಶೈಕ್ಷಣಿಕ ಜಾಗೃತಿ ಮೂಡುತ್ತಿದೆ ಎಂದು ಹೊಸದುರ್ಗ ಕಾಗಿನೆಲೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕು ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಜಿಲ್ಲಾ ಕುರುಬರ ಸಂಘದಿಂದ 2023-2024 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ನಮ್ಮ ಸಮುದಾಯದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಆದರೆ ಜನಾಂಗ, ಸಂಘಟನೆಗಳು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಹಿಂದೆ ಬಿದ್ದಿವೆ. ತಾತ್ಸಾರ ಮನೋಭಾವನೆ ಬೇಡ. 2002 ರಲ್ಲಿ ಆರಂಭಗೊಂಡ ಪ್ರತಿಭಾ ಪುರಸ್ಕಾರದಲ್ಲಿ 25 ವಿದ್ಯಾರ್ಥಿಗಳನ್ನು ಗೌರವಿಸಿ ಪ್ರೋತ್ಸಾಹಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ನಿರಂತರವಾಗಿ ನಡೆದುಕೊಂಡು ಬರುತ್ತಿದೆ

ಕುರುಬ ಜನಾಂಗದಲ್ಲಿ ಗೋಲ್ಡ್ ಮೆಡಲಿಸ್ಟ್ಗಳಿದ್ದಾರೆ. ಅಂತಹವರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸವಾಗಬೇಕು. ನಮ್ಮ ಸಮುದಾಯದಲ್ಲಿ ಬಡವರಿರಬಹುದು. ಆದರೆ ಪ್ರತಿಭಾವಂತರಿಗೆ ಕೊರತೆಯಿಲ್ಲ. ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಆರ್ಥಿಕ ಸಹಾಯ ಮಾಡಿದರೆ ಬೇರೆಯವರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಎಂಟು ಲಕ್ಷ ರೂ.ಗಳನ್ನು ಸಂಗ್ರಹ ಮಾಡಿ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ. ಇದಕ್ಕೆ ಜನಾಂಗದ ಪ್ರತಿಯೊಬ್ಬರು ಆರ್ಥಿಕ ನೆರವು ಸೇರಿಸಿದರೆ ಪ್ರತಿ ವರ್ಷವೂ ದೊಡ್ಡ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರವನ್ನು ಮಾಡಲು ಸಹಾಯವಾಗಲಿದೆ ಎಂದು ಮನವಿ ಮಾಡಿದರು.

ಪ್ರತಿಭೆಗಳು ನಮ್ಮ ಸಮುದಾಯದಲ್ಲಿ ಕಮ್ಮಿಯಿಲ್ಲ. ಆರ್ಥಿಕವಾಗಿ ಶಕ್ತಿಯಿಲ್ಲದಂತಾಗಿದೆ. ..ಎಸ್. ಕೆ..ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಸ್.ಎಸ್.ಎಲ್.ಸಿ. ಪಿ.ಯು.ಸಿ.ಯಿಂದಲೆ ತಯಾರಾಗಬೇಕು. ಬೆಂಗಳೂರಿನಲ್ಲಿ ಇನ್ನೂರು ಮಕ್ಕಳಿಗೆ ಉಚಿತ ಊಟ ವಸತಿ, ಗ್ರಂಥಾಲಯ ವ್ಯವಸ್ಥೆ ಕಲ್ಪಿಸುವ ಚಿಂತನೆಯಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹತ್ತು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವಕಾಶ ವಂಚಿತ ಸಮುದಾಯಗಳಿಗೆ ಸೌಲಭ್ಯ ಸಿಗಬೇಕು. ಐದು ಉಚಿತ ಗ್ಯಾರೆಂಟಿಗಳನ್ನು ರಾಜ್ಯದ ಬಡವರಿಗೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ತಪ್ಪು ಮಾಡದಿದ್ದರೂ ವಿನಾ ಕಾರಣ ಎದುರಾಳಿಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರ ಮಾಡುತ್ತಿರುವುದರಿಂದ ನೈತಿಕ ಬೆಂಬಲವಾಗಿ ನಿಲ್ಲಬೇಕು. ದ್ವೇಷ ಅಸೂಯೆ ಬಿಟ್ಟು ಮೊದಲು ಸಂಘಟಿತರಾಗಿ ಧರ್ಮ ದೇಶ ಕಾಯುವ ಸಮರ್ಥ ಮಕ್ಕಳನ್ನು ತಯಾರು ಮಾಡಿ ಎಂದು ಜನಾಂಗದವರಿಗೆ ಸ್ವಾಮೀಜಿ ಕರೆ ನೀಡಿದರು.

 

 

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮಕ್ಕಳ ಪ್ರತಿಭೆಯನ್ನು ಕೇವಲ ಅಂಕಗಳಿಂದ ಅಳೆಯುವ ಬದಲು ಅದರಿಂದಾಚೆಯಿರುವ ಸಾಮಥ್ರ್ಯವನ್ನು ಬೆಳಕಿಗೆ ತರಬೇಕು. ಶಿಕ್ಷಣದ ಜೊತೆ ಮಕ್ಕಳಿಗೆ ಸಂಸ್ಕಾರ, ಗುರುಹಿರಿಯರನ್ನು ಗೌರವಿಸುವ ಗುಣ ಕಲಿಸಬೇಕಿದೆ ಎಂದರು.

ಆಧುನಿಕ ಯುಗದಲ್ಲಿ ಮಕ್ಕಳು ಮೊಬೈಲ್, ಫೇಸ್ಬುಕ್, ವಾಟ್ಸ್ಪ್ ವ್ಯಾಮೋಹಗಳಿಗೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಪೋಷಕರು ಮತ್ತು ಶಿಕ್ಷಕರುಗಳು ಮಕ್ಕಳನ್ನು ಸರಿದಾರಿಗೆ ಕರೆದುಕೊಂಡು ಹೋಗುವ ನಿಟ್ಟಿನಲ್ಲಿ ಗಮನ ಕೊಡಬೇಕೆಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಘೋಷ ವಾಕ್ಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಎಲ್ಲಾ ಸಮುದಾಯದವರು ಒತ್ತು ಕೊಡಬೇಕು. ಯಾವುದೇ ಒಂದು ಸಮಾಜ ಶಿಕ್ಷಣವಂತರಾದಾಗ ಮಾತ್ರ ಬಡತನ, ದಾರಿದ್ರ್ಯದಿಂದ ಹೊರ ಬರಲು ಸಾಧ್ಯ, ಅದಕ್ಕಾಗಿ ಶಿಕ್ಷಣ ಜಾಗೃತಿ ಮೂಡಿಸಿಕೊಳ್ಳಿ ಎಂದು ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಣದ ಜೊತೆ ಗುರುಹಿರಿಯರನ್ನು ಗೌರವಿಸುವ ಸಂಸ್ಕøತಿ, ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಹೊಣೆಗಾರಿಕೆ ಪೋಷಕರು ಹಾಗೂ ಶಿಕ್ಷಕರುಗಳ ಮೇಲಿದೆ. ಜಿಲ್ಲಾ ಕುರುಬರ ಸಂಘ ಮತ್ತು ತಾಲ್ಲೂಕು ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ ಜೊತೆಗೂಡಿ ಮುಂದಿನ ವರ್ಷದಿಂದ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಸ್ವಾಮೀಜಿಗಳ ಜೊತೆ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷೆ ಶ್ರೀಮತಿ ರಜಿನಿ ಲೇಪಾಕ್ಷಿ, ಕುರುಬರ ಸಂಘದ ಮಹಿಳಾಧ್ಯಕ್ಷೆ ಶ್ರೀಮತಿ ಎನ್.ಎಂ.ಪುಷ್ಪವಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರೇಣುಪ್ರಸಾದ್, ಡಾ.ರೇಖ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ವೇದಿಕೆಯಲ್ಲಿದ್ದರು

Leave a Reply

Your email address will not be published. Required fields are marked *