ಲಿಂಗ ಪತ್ತೆ ಮಾಡಿದರೆ ಹುಷಾರ್!!!

ಜಿಲ್ಲಾ ಸುದ್ದಿ

ಲಿಂಗ ಪತ್ತೆ ಮಾಡಿದರೆ ಹುಷಾರ್!!!

 

 

ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು ಶಿಕ್ಷಾರ್ಹ ಅಪರಾಧವಾಗಿದೆ. ಪುರುಷ-ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡುವ ದೃಷ್ಟಿಯಿಂದ ಈ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಗರ್ಭಧಾರಣಾ ಪೂರ್ವ ಮತ್ತು ಪ್ರಸರ್ವ ಪೂರ್ವ ಲಿಂಗಪತ್ತೆ ತಂತ್ರವಿಧಾನಗಳ ನಿಷೇಧ (ಪಿಸಿ & ಪಿಎನ್‍ಡಿಟಿ) ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಸದ್ಯ ಜಿಲ್ಲೆಯಲ್ಲಿ ಸರ್ಕಾರಿ-04 ಹಾಗೂ ಖಾಸಗಿ-53 ಸೇರಿದಂತೆ ಒಟ್ಟು 57 ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ-03 ಹಾಗೂ ಖಾಸಗಿಯ 14 ಸೇರಿದಂತೆ ಒಟ್ಟು 17 ಸ್ಕ್ಯಾನಿಂಗ್ ಯಂತ್ರಗಳು ವಿವಿಧ ಕಾರಣಗಳಿಂದಾಗಿ ಸ್ಥಗಿತಗೊಂಡಿವೆ. ಪಿಸಿ & ಪಿಎನ್‍ಡಿಟಿ ಕಾಯ್ದೆಯನ್ವಯ ನಿಯಮಾನುಸಾರ ಅನುಮತಿ ಪಡೆದು, ನಡೆಯುತ್ತಿರುವ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್‍ಗಳು, ಪ್ರತಿಯೊಂದು ಸ್ಕ್ಯಾನಿಂಗ್ ಪ್ರಕರಣಗಳನ್ನು ಕೂಡ ರಜಿಸ್ಟರ್‍ನಲ್ಲಿ ನಮೂದಿಸಿ, ಆಯಾ ದಿನದಂದೇ ನಮೂನೆ ಎಪ್ ನಲ್ಲಿ ವರದಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು, ಈ ಕಾರ್ಯವನ್ನು ಮಾಡದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಯಾವುದೇ ಕಾರಣಕ್ಕೂ ಪ್ರಸವ ಪೂರ್ವ ಮತ್ತು ಗರ್ಭಪೂರ್ವ ಭ್ರೂಣಲಿಂಗ ಪತ್ತೆ ಮಾಡುವಂತಿಲ್ಲ ಅಲ್ಲದೆ, ಸ್ಕ್ಯಾನಿಂಗ್ ನಡೆಸುವ ಸ್ಥಳದಲ್ಲಿ ಯಾವುದೇ ಬಗೆಯ ಛಾಯಾಚಿತ್ರಗಳು, ದೇವರ ಫೋಟೋಗಳನ್ನು ಕೂಡ ಹಾಕುವಂತಿಲ್ಲ. ಇವೆಲ್ಲ ನಿಯಮಗಳನ್ನು ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್‍ಗಳು ತಪ್ಪದೆ ಪಾಲಿಸಲೇಬೇಕು. ಲಿಂಗಪತ್ತೆ ಕಾನೂನಿಗೆ ವಿರುದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ಗಳ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ವೈದ್ಯರಿಗೂ ಕೂಡ ರಾಜ್ಯ ವೈದ್ಯಕೀಯ ಮಂಡಳಿಯಿಂದ ವೈದ್ಯಕೀಯ ವೃತ್ತಿ ಮಾಡದಂತೆ ಐದು ವರ್ಷಗಳವರೆಗೆ ನಿಷೇಧ ವಿಧಿಸಲಾಗುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ ಸೆಂಟರ್‍ಗಳು, ಜೆನಿಟಿಕ್ ಕ್ಲಿನಿಕ್‍ಗಳು, ಜೆನಿಟಿಕ್ ಪ್ರಯೋಗಾಲಯಗಳು ಕೆಪಿಎಂಇ ನಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸ್ಕ್ಯಾನಿಂಗ್ ಸೆಂಟರ್ ನೊಂದಣಿಗೆ 25 ಸಾವಿರ ರೂ. ಹಾಗೂ ನರ್ಸಿಂಗ್ ಹೋಂ ಅಥವಾ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಯಂತ್ರ ಅಳವಡಿಕೆ ನೊಂದಣಿಗೆ 35 ಸಾವಿರ ರೂ. ಶುಲ್ಕ ನಿಗದಿಪಡಿಸಿದ್ದು, ಅನುಮತಿಗಾಗಿ ಅರ್ಜಿ ಸಲ್ಲಿಸುವ ವಿಧಾನವನ್ನು ಸಂಪೂರ್ಣ ಆನ್‍ಲೈನ್ ಮಾಡಲಾಗಿದೆ. ಇವರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಟ್ರೇಡ್ ಲೈಸೆನ್ಸ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ 70 ದಿನಗಳ ಒಳಗಾಗಿ ವಿಲೇವಾರಿ ಮಾಡುವಂತೆ ತಂತ್ರಾಂಶದಲ್ಲಿ ವಿಧಾನವನ್ನು ಅಳವಡಿಸಲಾಗಿದೆ ಎಂದರು.
ಹೆಲ್ತ್ ಮ್ಯಾನೇಜ್‍ಮೆಂಟ್ ಇನ್‍ಫಾರ್ಮೇಷನ್ ಸಿಸ್ಟಂ (ಹೆಚ್‍ಎಂಐಎಸ್) ನಲ್ಲಿ ದಾಖಲಾಗಿರುವ ಅಂಕಿ-ಅಂಶಗಳನ್ವಯ ಜಿಲ್ಲೆಯಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿನ ಲಿಂಗಾನುಪಾತ ಗಮನಿಸಿದಾಗ ಏರಿಳಿಕೆ ಕಂಡುಬಂದಿದೆ. 2016-17 ರಲ್ಲಿ ಒಂದು ಸಾವಿರ ಗಂಡು ಮಗು ಜನನಕ್ಕೆ 948 ಹೆಣ್ಣು ಮಗು ಜನನ ದಾಖಲಾಗಿದೆ. ಅದೇ ರೀತಿ 2017-18 ರಲ್ಲಿ 941, 18-19 ರಲ್ಲಿ 916, 19-20 ರಲ್ಲಿ 928, 20-21 ರಲ್ಲಿ 950, 21-22 ರಲ್ಲಿ 945 ಹಾಗೂ ಈ ವರ್ಷ ಇದುವರೆಗೆ 966 ದಾಖಲಾಗುವ ಮೂಲಕ ಲಿಂಗಾನುಪಾತ ವೃದ್ಧಿಯಲ್ಲಿ ಭರವಸೆಯನ್ನು ಮೂಡಿಸಿದೆ. ಲಿಂಗಾನುಪಾತ ವೃದ್ಧಿಗೆ ಪಿಸಿ & ಪಿಎನ್‍ಡಿಟಿ ಕಾಯ್ದೆ ಕುರಿತಂತೆ ಐಇಸಿ ಚಟುವಟಿಕೆಗಳು, ಪೋಸ್ಟರ್ ಹಾಗೂ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು, ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಡಿಹೆಚ್‍ಒ ಡಾ. ರಂಗನಾಥ್ ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಸೌಮ್ಯ, ಸದಸ್ಯರುಗಳಾದ ಡಾ. ರೇಣುಪ್ರಸಾದ್, ಡಾ. ಸತ್ಯನಾರಾಯಣ, ಎಂ. ಉಮೇಶ್, ಕೆ.ಪಿ. ಮೀನಾಕ್ಷಿ, ಗಾಯಿತ್ರಿ ಶಿವರಾಂ, ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಮೈರಾಡ ಸಂಸ್ಥೆಯ ಸುನೀಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *