ಗಾಂಧಿ ಕೊಂದ ದುಷ್ಟನ ವೈಭವೀಕರಣದ ವಿಕೃತ: ಆಂಜನೇಯ ಕಳವಳ

ಜಿಲ್ಲಾ ಸುದ್ದಿ

 

ಗಾಂಧಿ ಕೊಂದ ದುಷ್ಟನ ವೈಭವೀಕರಣದ ವಿಕೃತ

 

 

ಮಾಜಿ ಸಚಿವ ಎಚ್.ಆಂಜನೇಯ ಕಳವಳ

ಚಿತ್ರದುರ್ಗ. ಅ.2:  ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಲಕ್ಷಾಂತರ ಮಂದಿ ಬಲಿದಾನ ಮಾಡಿದ್ದು, ಅಂತಹ ಮಹನೀಯರ ಆಶಯಗಳಿಗೆ ಪ್ರಸ್ತುತ ಕಂಟಕ ಎದುರಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಕಳವಳ ವ್ಯಕ್ತಪಡಿಸಿದರು.
ಹೊಳಲ್ಕೆರೆ ಪಟ್ಟಣದ ವಾಲ್ಮೀಕಿ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚಣೆ ಉದ್ಘಾಟಿಸಿ ಮಾತನಾಡಿದರು.


ಬ್ರಿಟಿಷರ ಕಪಿಮುಷ್ಟಿಗೆ ಸಿಲುಕಿದ್ದ ಭಾರತವನ್ನು ಸ್ವತಂತ್ರ ದೇಶವನ್ನಾಗಿಸಲು ಮಹಾತ್ಮ ಗಾಂಧೀಜಿ  ನೇತೃತ್ವದಲ್ಲಿ ನಡೆದ ಅಹಿಂಸಾ ಚಳವಳಿ ಜಗತ್ತಿಗೆ ಮಾದರಿ ಆಗಿದೆ. ಶಸ್ತ್ರಾಸ್ತ್ರ ರಹಿತ, ಶಾಂತಿಯುತ ಹೋರಾಟದಲ್ಲಿ ದೇಶಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಗಾಂಧೀಜಿ ಸೇರಿದಂತೆ ಲಕ್ಷಾಂತರ ಜನರ ತ್ಯಾಗ ಬಲಿದಾನ ಇದೆ ಎಂದರು. ಸ್ವತಂತ್ರದ ಬಳಿಕ ದೇಶ ಎಲ್ಲ ಜಾತಿ, ಧರ್ಮದ ಜನ ಸೌಹಾರ್ಧ ಜೀವನ ನಡೆಸಬೇಕೆಂಬ ಆಶಯವನ್ನು ಮಹನೀಯರು ಹೊಂದಿದ್ದರು.‌ ಈ ಕಾರಣಕ್ಕೆ ಬಸವತತ್ವದ ಸಿದ್ಧಾಂತಡಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ಇಂದು ಮಹನೀಯರ ಆಶಯ ಹಾಗೂ ಸಂವಿಧಾನಕ್ಕೆ ಕಂಟಕ ಎದುರಾಗಿದೆ ಎಂದು ಆಂಜನೇಯ ಆತಂಕ ವ್ಯಕ್ತಪಡಿಸಿದರು.
ನೂರಾರು ವರ್ಷಗಳ ಕಾಲ ಆಂಗ್ಲರು ಸಂಪತ್ತನ್ನು ಕೊಳೆ ಹೊಡೆದಿದ್ದ ಪರಿಣಾಮ ಭಾರತ ಬರಿದಾಗಿತ್ತು. ದೇಶದಲ್ಲಿ ನಿರುದ್ಯೋಗ, ಹಸಿವು, ಕಾಲರಾ ತಾಂಡಾವವಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಗಾಂಧೀಜಿ ಆಶಯಕ್ಕೆ ಸಣ್ಣ ಧಕ್ಜೆ ಆಗದಂತೆ ಕಾಂಗ್ರೆಸ್ ಪಕ್ಷದ ನೆಹರು, ವಲ್ಲಭಭಾಯಿ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ದೇಶವನ್ನು ಆಳಿದ ಎಲ್ಲ ನಾಯಕರು ಭಾರತವನ್ನು ಕಟ್ಟುವಲ್ಲಿಪ್ರಾಮಾಣಿಕವಾಗಿ ಶ್ರಮಿಸಿದರು. ನೂರಾರು ಕೈಗಾರಿಕೆ, ಜಲಾಶಯ, ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನಾ ಕೇಂದ್ರ, ವಿಶ್ವವಿದ್ಯಾಲಯ, ಶಿಕ್ಷಣ ಕೇಂದ್ರ ಸ್ಥಾಪಿಸಿದರು. ಹಸಿವು, ನಿರುದ್ಯೋಗ ಮುಕ್ತ ದೇಶ ಮಾಡುವಲ್ಲಿ ಅಧಿಕಾರ ನಡೆಸಿದರು ಎಂದರು. ರೈಲು ಅಪಘಾತದ ನೈತಿಕಹೊಣೆವೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಾಸ್ತ್ರೀಜಿ, ನಿಧನರಾದ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿ ಹಣವೇ ಇರಲಿಲ್ಲ.‌ ಜೈ ಜವಾನ್ ಜೈ ಕಿಸಾನ್ ಘೋಷಣೆ ಇಂದಿಗೂ ಆದರ್ಶವಾಗಿ ಉಳಿದಿದೆ. ಗಾಂಧೀಜಿ, ಶಾಸ್ತ್ರಿಜಿ, ಅಂಬೇಡ್ಕರ್  ಆಶಯಗಳ ಅಡಿಯಲ್ಲಿ ದೇಶವನ್ನು ಆಳಿದ ಎಲ್ಲ ನಾಯಕರು ಆಡಳಿತ ನಡೆಸಿದ್ದಾರೆ.
ಆದರೆ, ಇತ್ತೀಚೆಗೆ ಎಂಟು ವರ್ಷಗಳಲ್ಲಿ ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ವಿಭಜಿಸುವ ಕುತಂತ್ರ ಜೋರಾಗಿ ನಡೆಯುತ್ತಿದೆ. ದೇಶದ ಸಾರ್ವಜನಿಕ ಆಸ್ತಿಗಳನ್ನು ಬಂಡವಾಳಗಾರರಿಗೆ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ದೇಶದ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಸಲಾಗಿದೆ, ಸಿಲಿಂಡರ್, ಬೇಳೆಕಾಳು ಬೆಲೆ ದುಬಾರಿ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಜನರ ಗಮನ ಬೇರೆ ಕಡೆ ಸೆಳೆಯಲು ಜಾತಿ, ಧರ್ಮದ ವಿಷ ಬೀಜವನ್ನು ಜನರ ಮನದಲ್ಲಿ ಬಿತ್ತಲಾಗುತ್ತಿದೆ ಎಂದು ಬೇಸರಿಸಿದರು.
ಬ್ರಿಟಿಷರ ಕಾಲದಲ್ಲಿ ಹೇಗೆ ಹಿಂದು-ಮುಸ್ಲಿಂ ಎಂದು ದೇಶವನ್ನು ಇಬ್ಭಾಗ ಮಾಡಲು ಯತ್ನಿಸಿದ್ದರೋ ಅದೇ ರೀತಿಯ ವ್ಯವಸ್ಥೆ ರಾಜಕಾರಣಕ್ಕಾಗಿ ದೇಶದಲ್ಲಿ ಮರುಕಳಿಸುತ್ತಿದೆ. ಗಾಂಧಿಯನ್ನು ಕೊಂದ ದೇಶದ್ರೋಹಿ ನಾತುರಾಮ್ ಗೂಡ್ಸೆಯನ್ನು ವೈಭವಿಕರಿಸುವ ಕುತಂತ್ರಿಗಳು, ದೇಶಭಕ್ತ ಮುಖವಾಡದಲ್ಲಿ ದೇಶದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದಾರೆ. ಜನರ ಮನಸ್ಸು ಕಲುಷಿತಗೊಳಿಸುವ ದುಷ್ಕೃತ್ಯ ಎಲ್ಲೆಡೆ ನಡೆಯುತ್ತಿದ್ದು, ಭಾರತ ಮತ್ತೊಮ್ಮೆ ದುಷ್ಟರ ಕಪಿಮುಷ್ಟಿಗೆ ಸಿಲುಕುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶವನ್ನು ಈ ವಿಷ ವರ್ತುಲದಿಂದ ಹೊರತರಲು, ಜಾತಿ, ಧರ್ಮದ ಹೆಸರಲ್ಲಿ ಇಬ್ಬಾಗ ಆಗದಂತೆ, ಕುತಂತ್ರಿಗಳ ಕೋಮುಭಾವನೆ ಭಾಷಣಕ್ಕೆ ಮರುಳಗಾದಂತೆ, ದೇಶದ ಜನರಲ್ಲಿ ನಾವೆಲ್ಲ ಭಾರತೀಯರು ಎಂಬ ಭಾವನೆ ಮೂಡಿಸಲು ಜಗತ್ತಿನಲ್ಲಿ ಈ ಶತಮಾನದಲ್ಲಿಯೇ ಐತಿಹಾಸಿಕ ಪಾದಯಾತ್ರೆಯನ್ನು ರಾಷ್ಟ್ರ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದಾರೆ.
ಪಕ್ಷಾತೀತ ಯಾತ್ರೆಯಲ್ಲಿ ನಿರೀಕ್ಷೆಮೀರಿ ಜನರು ಪಾಲ್ಗೊಂಡು, ಭಾವಿ ಪ್ರಧಾನಿ ರಾಹುಲ್ ಗಾಂಧಿ ಬಳಿ ಜನ ತಮ್ಮ ಭಾವನೆ, ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಮತ್ತೊಂದು ಸ್ವಾತಂತ್ರ್ಯ ಚಳವಳಿ ರೂಪವನ್ನು ರಾಹುಲ್ ಕಾಲ್ನಡಿಗೆ ಯಾತ್ರೆಪಡೆದುಕೊಳ್ಳುತ್ತಿದ್ದು, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ವಾರಸುದಾರರಲ್ಲಿ ನಡುಕ ಉಂಟಾಗಿದೆ ಎಂದು ಹೇಳಿದರು. ಜನ ಒಗ್ಗೂಡಿದರೆ ದುಷ್ಟರು ಎಷ್ಟೇ ಬಲಶಾಲಿ, ಕುತಂತ್ರಿಗಳಾಗಿದ್ದರು ಭಯಭೀತಿಗೊಳ್ಳುತ್ತಾರೆ ಎಂಬುದಕ್ಕೆ ಭಾರತ್ ಜೋಡೋ ಯಾತ್ರೆಯೇ ಉತ್ತಮ ಉದಾಹರಣೆ ಎಂದು ಆಂಜನೇಯ ಅಭಿಪ್ರಾಯಪಟ್ಟರು.
ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಭರಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುರ್ಗೇಶ್ ಪೂಜಾರ್, ಭಾರತ್ ಜೋಡೋ ಯಾತ್ರೆ ಕೊ ಅರ್ಡಿನೆಟರ್ ದೊಡ್ಡರಂಗಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಜರ್ ಉಲ್ಲಾ ಖಾನ್, ಜಿ.ಪಂ.ಮಾಜಿ ಉಪಾಧ್ಯಕ್ಷ ಬಿ.ಗಂಗಾಧರ್,ಮಾಜಿ ಸದಸ್ಯರಾದ ಎಸ್. ಜೆ.ರಂಗಸ್ವಾಮಿ, ಎಂ.ಜಿ.ಲೋಹಿತ್ ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಕೇಶವ್ ಮೂರ್ತಿ, ಕೆಪಿಸಿಸಿ ಸಂಯೋಜಕ ಲೋಕೇಶ್ ನಾಯ್ಕ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು,ಪದಾಧಿಕಾರಿಗಳು,ಗ್ರಾಮ ಪಂಚಾಯಿತಿ ಮಾಜಿ ಮತ್ತು ಹಾಲಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *