ಉಪಚುನಾವಣೆ : ಮತದಾನ ಮುಗೀತು, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

ರಾಜಕೀಯ ರಾಜ್ಯ

ಉಪಚುನಾವಣೆ : ಮತದಾನ ಮುಗೀತು, ಶುರುವಾಯ್ತು ಸೋಲು-ಗೆಲುವಿನ ಲೆಕ್ಕಾಚಾರ

ಬೆಂಗಳೂರು, ನ. 5-ಜಿದ್ದಾಜಿದ್ದಿನ ಕಣವಾಗಿದ್ದ ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಶಾಂತಿಯುತವಾಗೇನೋ ಮುಗಿದಿದೆ. ಚಳಿ, ಮಳೆ, ಬಿಸಿಲನ್ನೂ ಲೆಕ್ಕಿಸದೇ ಮತ ಬೇಟೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು ಈಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದೀಗ ಅಭ್ಯರ್ಥಿಗಳ ಪರ ಬಾಜಿದಾರರು ಸೋಲು-ಗೆಲುವಿನ ಲೆಕ್ಕಾಹಾಕುತ್ತಿದ್ದು, ಬೆಟ್ಟಿಂಗ್ ಸಮರ ಜೋರಾಗಿ ಸದ್ದು ಮಾಡುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತಮಗೆ ಲಾಭವಾಗಬಹುದು ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.

ಮತದಾನ ನಡೆದಿರುವ ಮತಗಟ್ಟೆ ಕೇಂದ್ರಗಳ ಪಟ್ಟಿ ಹಿಡಿದಿರುವ ಮುಖಂಡರು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಯಾವ ಬೂತ್‍ನಲ್ಲಿ ಯಾವ ಜಾತಿಯವರಿದ್ದಾರೆ? ಜಾತಿ ಬೆಂಬಲ ಯಾವ ಪಕ್ಷಕ್ಕಿದೆ? ಬೂತ್ ಮಟ್ಟದಲ್ಲಿ ಮತದಾರರ ಸಂಖ್ಯೆ ಎಷ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತಿದ್ದಾರೆ.

 

 

ಇದಕ್ಕೆ ಪಕ್ಷದ ಮುಖಂಡರು ಸಾಥ್ ನೀಡುತ್ತಿದ್ದು, ಎಳೆ ಎಳೆಯಾಗಿ ಮತದಾನ ವಿವರ ಬಿಚ್ಚಿಡುತ್ತಿದ್ದಾರೆ. ನಾನಾ ಸುದ್ದಿ ವಾಹಿನಿಗಳು ತಿಳಿಸುತ್ತಿರುವ ಚುನಾವಣಾ ಸಮೀಕ್ಷೆಗಳ ವರದಿಯನ್ನು ನೋಡಿ ಕಾರ್ಯಕರ್ತರು ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ ಎಂದು ಬೀಗುತ್ತಿದ್ದಾರೆ. ಶಿರಾದಲ್ಲಿ ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರು, ಕುರುಬರು ಮತ್ತು ಸಣ್ಣ ಸಮುದಾಯಗಳು ಗೆಲುವಿನ ದಡ ಸೇರಿಸಲಿವೆ ಎಂಬ ಅಂದಾಜು ಕಾಂಗ್ರೆಸ್ ಹಾಗೂ ಜೆಡಿಎಸ್ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಮತಗಳು ಮೂವರಿಗೂ ಹಂಚಿಹೋಗಿರುವ ಕಾರಣ, ಒಕ್ಕಲಿಗರು, ಗೊಲ್ಲರು, ಸಣ್ಣ ಸಣ್ಣ ಸಮುದಾಯದ ಜೊತೆಗೆ ಮೇಲ್ವರ್ಗದ ಮತಗಳ ಜತೆಗೆ ಜೆಡಿಎಸ್ ಮತಗಳು ಮತ್ತು ಹೊಸ ಮತದಾರರ ಮತಗಳು ಈ ಬಾರಿ ಬಿಜೆಪಿಗೇ ಬಿದ್ದು, ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರ ಕೋಟೆಯಲ್ಲಿ ಕಮಲದ ಖಾತೆ ತೆರೆಯಲು ನೆರವಾಗಲಿವೆ ಎಂಬ ಸಮೀಕರಣಗಳು ಹರಿದಾಡುತ್ತಿವೆ.

ಆಯಾ ಗ್ರಾಮದ ಪಕ್ಷದ ಕಾರ್ಯಕರ್ತರು ಹಾಗೂ ಆಯಾ ಬೂತ್‍ನಲ್ಲಿದ್ದ ಕಾರ್ಯಕರ್ತರು ಗ್ರಾಮಗಳಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಖರ್ಚು ಮಾಡಿದ ಬಗ್ಗೆ ಕೂಡ ಚರ್ಚೆ ಮಾಡುತ್ತಿದ್ದಾರೆ

ಸಂಯುಕ್ತವಾಣಿ

Leave a Reply

Your email address will not be published. Required fields are marked *