ಹೊಳಲ್ಕೆರೆ : ರೈತರ ತೋಟಗಳು ಒಣಗಬಾರದೆಂದು ಭದ್ರಾ ಯೋಜನೆಯಿಂದ ನೀರು ತರುವುದಕ್ಕಾಗಿ ಮಲಸಿಂಗನಹಳ್ಳಿ ಗುಡ್ಡದಲ್ಲಿ ೧೦೫ ಕೋಟಿ ರೂ.ವೆಚ್ಚದಲ್ಲಿ ಮೂರು ಮೋಟಾರ್‌ಗಳನ್ನು ಕೂರಿಸಿ ಟಿ.ಎಮ್ಮಿಗನೂರು, ಶಿವಗಂಗ, ತಾಳ್ಯ, ಹೆಚ್.ಡಿ.ಪುರ, ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗುವುದೆಂದು ಶಾಸಕ ಡಾ.ಎಂ.ಚoದ್ರಪ್ಪ ಹೇಳಿದರು.
ಹಳೆಹಳ್ಳಿ ಲಂಬಾಣಿಹಟ್ಟಿಯಿಂದ ಗಿಲಕೇನಹಳ್ಳಿ, ಗರಗ, ಮೇಕೆನಹಟ್ಟಿ ಮುಖಾಂತರ ಅಪ್ಪರಸನಹಳ್ಳಿವರೆಗೆ ಕೆ.ಎಂ.ಇ.ಆರ್.ಸಿ.ಯೋಜನೆಯಡಿ ೧೫.೪೮ ಕೋಟಿ ರೂ.ವೆಚ್ಚದಲ್ಲಿ
ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಭರಮಸಾಗರ ಶಾಸಕನಾಗಿದ್ದಾಗ ಸರ್ಕಾರದಲ್ಲಿ ಹಣವಿರಲಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿ ಐದು ವರ್ಷಗಳ ಕಾಲ ಹಗಲಿರುಳು ಶ್ರಮಿಸಿ ೩೮೬ ಹಳ್ಳಿ ರಸ್ತೆಗಳಲ್ಲಿ ಮಾಡಿಸಿದ್ದರಿಂದ ಜನ ನನಗೆ ರಸ್ತೆ ರಾಜ ಎಂಬ ಬಿರುದು ನೀಡಿ 2ನೇ ಬಾರಿಗೂ ಚುನಾವಣೆಯಲ್ಲಿ ಗೆಲ್ಲಿಸಿದರು. ಸಾರ್ವಜನಿಕರ ಬದುಕನ್ನು ಅರ್ಥಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ನನ್ನ ಮೈಯಲ್ಲಿ ಒಂದು ತೊಟ್ಟು ರಕ್ತವಿರುವತನಕ ಗಿಲಿಕೇನಹಳ್ಳಿ ಜನರನ್ನು ಮಾತ್ರ ಮರೆಯುವುದಿಲ್ಲ ಎಂದರು.
ಹೊಳಲ್ಕೆರೆ ಕ್ಷೇತ್ರಕ್ಕೆ ೪೯೩ ಹಳ್ಳಿಗಳು ಸೇರಿದ್ದು, ಚನ್ನಗಿರಿ, ತರಿಕೆರೆಯ ಗಡಿವರೆಗೂ ನನ್ನ ವ್ಯಾಪ್ತಿಯಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕು ೭೮ ವರ್ಷಗಳಾಗಿದ್ದರೂ ಈ ಹಳ್ಳಿಗಳಿಗೆ ರಸ್ತೆಯಿರಲಿಲ್ಲ ಎನ್ನುವುದನ್ನು ಗಮನಿಸಿ ತಾಲ್ಲೂಕಿನಾದ್ಯಂತ ಎಲ್ಲಾ ಹಳ್ಳಿಗಳಲ್ಲಿ ಗುಣಮಟ್ಟದ ರಸ್ತೆ ಮಾಡಿಸಿದ್ದೇನೆ. ರಸ್ತೆಗಳು ಎಲ್ಲಿ ಅಭಿವೃದ್ದಿಯಾಗಿರುತ್ತವೋ ಅಂತಹ ದೇಶ ಅಭಿವೃದ್ದಿಯತ್ತ ಸಾಗುತ್ತಿದೆ ಎಂದರ್ಥ. ಅದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಹಾಗೂ ನಿತಿನ್‌ಗಡ್ಕರಿ ಇವರುಗಳು ರಸ್ತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇಲ್ಲಿ ಪುಷ್ಕರಣಿಗೆ ಒಂದು ಹನಿ ನೀರು ಬರುತ್ತಿರಲಿಲ್ಲ. ಪೈಪ್‌ಲೈನ್ ಹಾಕಿಸಿ ನೀರು ತುಂಬಿಸಿದ್ದೇನೆ. ಸರ್ಕಾರ ಯಾವುದಾದರೂ ಇರಲಿ. ಅನುದಾನ ತರುವುದು ನನಗೆ ಗೊತ್ತಿದೆ ಎಂದು ತಿಳಿಸಿದರು.
ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಶುದ್ದ ಕುಡಿಯುವ ನೀರು ತಂದು ಪ್ರತಿ ಮನೆಗೂ ಪೂರೈಸುವುದಕ್ಕಾಗಿ ಪೈಪ್‌ಲೈನ್ ಅಳವಡಿಸಲು ೩೬೭ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ವಿ.ವಿ.ಸಾಗರದ ಮಧ್ಯೆ ನೀರಿನಲ್ಲಿ ಐವತ್ತರಿಂದ ೬೦ ಅಡಿ ಆಳದಲ್ಲಿ ಪೈಪ್‌ಲೈನ್ ಹಾಕಿ ಮೋಟಾರ್ ಕೂರಿಸಿ ಫಿಲ್ಟರ್ ಅಳವಡಿಕೆಗೆ ೬೦ ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಇನ್ನು 3-4 ತಿಂಗಳಲ್ಲಿ ನೀರು ಸರಬರಾಜು ಮಾಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾಣಿಗಿರೀಶ್, ಉಪಾಧ್ಯಕ್ಷರಾದ ವಿಶಾಲಮ್ಮ, ಗಂಗಾಧರಚಾರಿ, ಸದಸ್ಯರುಗಳಾದ ರಾಮಪ್ಪ, ಹನುಮಂತಪ್ಪ, ಈಶ್ವರಪ್ಪ, ಗೋವಿಂದಪ್ಪ, ರಂಗಸ್ವಾಮಿ, ರಾಜಪ್ಪ, ಶಿವಣ್ಣ, ರಂಗಪ್ಪ, ಕೃಷ್ಣಮೂರ್ತಿ, ರಾಜಪ್ಪ, ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಗುತ್ತಿಗೆದಾರ ಜೈರಾಮ್, ಗಿಲಿಕೇನಹಳ್ಳಿ, ಗರಗ, ಮೇಕೇನಹಟ್ಟಿಯ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.