ಸಿಎಂಗೆ ಎಚ್ಚರಿಕೆ ನೀಡಿದ ಮಾದಿಗ ದಂಡೋರ ಮುಖಂಡ ಪಾವಗಡ ಶ್ರೀರಾಮ್

ರಾಜ್ಯ

ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯ ಎತ್ತಿಹಿಡಿಯದಿದ್ದರೆ ರಾಜ್ಯದ ಮುಖ್ಯಮಂತ್ರಿ ನಿವಾಸಕ್ಕೆ ಪಾದಯಾತ್ರೆ ಹೊರಡುವುದಾಗಿ ಮಾದಿಗ ಮುಖಂಡ ಪಾವಗಡ ಶ್ರೀರಾಮ್ ಎಚ್ಚರಿಸಿದರು.
ಹಿರಿಯೂರು ತಾಲ್ಲೂಕು ಸಮಿತಿ ದಲಿತಪರ ಸಂಘಟನೆಗಳ ಒಕ್ಕೂಟ ಪಟ್ರೆಹಳ್ಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಆಗಮಿಸಿದ ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಪಾವಗಡ ಶ್ರೀರಾಮ್ 30 ವರ್ಷಗಳಿಂದ ಎಲ್ಲಾ ಪಕ್ಷಗಳು ಮಾದಿಗರಿಗೆ ಮೋಸ ಮಾಡಿಕೊಂಡು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಒಳ ಮೀಸಲಾತಿ ಜಾರಿಗೊಳಿಸುವ ತನಕ ಈ ಹೋರಾಟ ನಿಲ್ಲುವುದಿಲ್ಲ.ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಬದಲು ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ ಉಪ ಜಾತಿಗಳ ಮೇಲೆ ನಿಜವಾಗಿಯೂ ಕಾಳಜಿಯಿದ್ದರೆ ಮೊದಲು ಒಳ ಮೀಸಲಾತಿ ಜಾರಿಗೊಳಿಸಿ ದಲಿತ ವಿರೋಧಿಯಲ್ಲ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ ಮಠದಿಂದ 2003 ರಲ್ಲಿ ಒಳ ಮೀಸಲಾತಿಗಾಗಿ ಮೊದಲು ಪಾದಯಾತ್ರೆ ಆರಂಭವಾಯಿತು. ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ನಮ್ಮ ನಮ್ಮಲ್ಲೆ ಒಡಕು ಮೂಡಿಸುವ ದುರಾಲೋಚನೆಯಿಟ್ಟುಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲ್ಲಿಕಾರ್ಜುನಖರ್ಗೆಯವರ ಕಡೆ ಕೈತೋರಿಸುತ್ತಿರುವುದು ಯಾವ ನ್ಯಾಯ? ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೀಸಲಾತಿ ಕೊಟ್ಟಿದ್ದರೂ ಸಮಪಾಲು ಹಂಚಿಕೆಯಾಗಿಲ್ಲ. ದಲಿತರನ್ನು ಕೇವಲ ಮತ ಬ್ಯಾಂಕನ್ನಾಗಿ ಬಳಸಿಕೊಳ್ಳುವುದನ್ನು ಬಿಟ್ಟು ಒಳ ಮೀಸಲಾತಿ ಜಾರಿಗೊಳಿಸಿ. ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ ಎಂದು ಪಾವಗಡ ಶ್ರೀರಾಮ್ ಮುಖ್ಯಮಂತ್ರಿಗೆ ಗಡುವು ನೀಡಿದರು.
ಸಾಮಾಜಿಕ ನ್ಯಾಯ, ಭದ್ರತೆ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ದಲಿತ ವಿರೋಧಿ ಎನ್ನುವ ಕಳಂಕ ಅಂಟಿಸಿಕೊಳ್ಳಬೇಡಿ. ಸುಪ್ರೀಂಕೋರ್ಟ್ ತೀರ್ಪಿನನ್ವಯ ಮೊದಲು ಒಳ ಮೀಸಲಾತಿ ಜಾರಿಗೊಳಿಸಿ. ಇಲ್ಲವಾದಲ್ಲಿ ನಿಮ್ಮ ನಿವಾಸಕ್ಕೂ ಮುತ್ತಿಗೆ ಹಾಕುತ್ತೇವೆಂದು ಬೆದರಿಕೆ ಹಾಕಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಗುರುಸ್ವಾಮಿ, ಹುಲ್ಲೂರು ಕುಮಾರಸ್ವಾಮಿ, ಹರಿರಾಮ್, ಲಕ್ಷ್ಮಿ, ಕೋಡಿಹಳ್ಳಿ ಸಂತೋಷ್, ಕೆ.ಟಿ.ಶಿವಕುಮಾರ್ ಸೇರಿದಂತೆ ನೂರಾರು ಮಾದಿಗರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

 

 

Leave a Reply

Your email address will not be published. Required fields are marked *