ಹೊಳಲ್ಕೆರೆ : ರೈತರಿಗೆ ಜೀವನಾಡಿಯಾಗಿರುವ ಕೆರೆಗಳಿಗೆ ನೀರು ತುಂಬಿಸುವುದು, ಹೊಸ ಕೆರೆಗಳ ನಿರ್ಮಾಣ, ಗೋಕಟ್ಟೆಗಳ ಅಭಿವೃದ್ದಿ, ಚೆಕ್‍ಡ್ಯಾಂಗಳನ್ನು ಕಟ್ಟುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ತೊಡರನಾಳ್ ಗ್ರಾಮದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಎರಡು ಕೆರೆಗಳ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತಾಡಿದರು.
ಮಕ್ಕಳಂತೆ ಅಡಿಕೆ ತೋಟ ಬೆಳೆಸುತ್ತಿರುವ ರೈತರಿಗೆ ಯಾವುದೇ ತೊಂದರೆಯಾಗದಿರಲು ಶಿವಗಂಗಾ, ತಾಳ್ಯ, ಹೆಚ್.ಡಿ.ಪುರ, ನಂದನಹೊಸೂರು ಸೇರಿದಂತೆ ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗುವುದು. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಲು ಚೆಕ್‍ಡ್ಯಾಂ, ಗೋಕಟ್ಟೆಗಳನ್ನು ನಿರ್ಮಿಸಲಾಗಿದೆ. ಭದ್ರಾ ಪ್ರಾಜೆಕ್ಟ್ ನಿಂದ ನೀರು ತಂದು ಕೆರೆಗಳನ್ನು ತುಂಬಿಸಲು 200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ವಿ.ವಿ.ಸಾಗರದ ಮಧ್ಯೆ ನಲವತ್ತು ಅಡಿ ಆಳದಲ್ಲಿ ಪಿಲ್ಲರ್ ಹಾಕಿ ಮೋಟಾರ್ ಕೂರಿಸಿ 60 ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಮುಂದಿನ 30 ವರ್ಷದ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ನೀರು ಹರಿಸಲಾಗುವುದು. ತೊಡರನಾಳ್ ಗ್ರಾಮದಲ್ಲಿ ಪುಷ್ಕರಣಿ ರೀತಿಯಲ್ಲಿ ಸುಂದರವಾಗಿ ಕೆರೆಗಳನ್ನು ಕಟ್ಟಲಾಗುವುದು ಎಂದರು.
ಈ ಗ್ರಾಮಕ್ಕೆ ಯಾರು ಏನು ಕೇಳಲಿ ಬಿಡಲಿ ಯಾವ ಕೆಲಸವನ್ನು ಆಗುವುದಿಲ್ಲವೆಂದು ಹೇಳಿಲ್ಲ. ಕ್ಷೇತ್ರದ ಜನಸಾಮಾನ್ಯರು, ರೈತರಿಗೆ ಉಪಯೋಗವಾಗುವ ಕೆಲಸ ಮಾಡುವುದು ರಾಜಕಾರಣಿಗಳ ಕರ್ತವ್ಯವೆಂದು ತಿಳಿದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಎಲ್ಲಾ ಕಡೆ ಗುಣಮಟ್ಟದ ರಸ್ತೆಗಳಾಗಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಕಾಂತಮ್ಮ ನಾಗರಾಜ್, ಸದಸ್ಯರುಗಳಾದ ಶ್ರೀಮತಿ ಕಮಲಮ್ಮ ನಾಗರಾಜ್, ಟಿ.ಸಿ.ರಾಜಪ್ಪ, ಕೆಂಚವೀರಪ್ಪ, ಕೃಷ್ಣಪ್ಪ, ವೀರಪ್ಪ, ಈಶಣ್ಣ, ದಗ್ಗೆಶಿವಪ್ರಕಾಶ್, ಪರಮೇಶ್ವರಪ್ಪ, ಅರುಣ್‍ಕುಮಾರ್, ಅಂಕಳಪ್ಪ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‍ಗಳಾದ ನಾಗರಾಜ್, ಶರಣಪ್ಪ ಹಾಗೂ ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.