ಒಳಮೀಸಲಾತಿಯನ್ನು ಸುಪ್ರೀಂ ಕೋರ್ಟ್ ನ ಆದೇಶದಂತೆ ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಹೈಕಮಾಂಡ್ ಬಳಿ ಹೋಗುತ್ತೇವೆ ಎಂದು ಹೊಳಲ್ಕೆರೆ ಮಾಜಿ ಶಾಸಕ ಹಾಗು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಅವರು ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಚಿತ್ರದುರ್ಗ ತರಾಸು ರಂಗಮಂದಿರದಲ್ಲಿ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತಾಡುತ್ತಾ, ಸರ್ಕಾರ ಒಳ ಮೀಸಲಾತಿ ಜಾರಿ ಮಾಡದೆ ಹೋದರೆ ನಾವೆಲ್ಲರೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಮಾದಿಗ ಸಮುದಾಯದ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಅಂಬೇಡ್ಕರ್ ಹಾಗೂ ಜಗಜೀವನ್ ರಾಂ ಶಿಕ್ಷಣದಿಂದ ಮಾತ್ರ ಬಡತನ ಹಸಿವು ಹೋಗಲಾಡಿಸಲು ಸಾಧ್ಯ ಎಂದಿದ್ದಾರೆ.ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತಾಡುತ್ತಾ,ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರೆದಾಗಲೇ ಕಲಂ 341 ರಲ್ಲಿ ಮೀಸಲಾತಿ ಬಗ್ಗೆ ಬರೆದಿದ್ದಾರೆ. ಯಾರಿಗೆ ಎಷ್ಟು ಹಾಗು ಶೈಕ್ಷಣಿಕ ಆರ್ಥಿಕ ಅಭಿವೃದ್ಧಿ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂದು ಬರೆದಿತ್ತು. ಇಂದು ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ ಮೀಸಲಾತಿ ಇದೆ. ಖಾಸಗಿ ಸಂಸ್ಥೆಗಳಲ್ಲಿ ಇಲ್ಲ ಎಂದು ಗಮನಿಸಬೇಕೆಂದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದ, ಸಂಸದ ಗೋವಿಂದ ಕಾರಜೋಳ, ಮಾದಿಗ ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆ ಇದೆ. ಒಗ್ಗಟ್ಟಿನಿಂದ ಹೋರಾಟ ನಡೆಸದೇ ಹೋದರೆ, ಮತ್ತೆ 30 ವರ್ಷಗಳು ಒಳ ಮೀಸಲಾತಿ ಜಾರಿಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು,ಎಚ್ಚರಿಸಿ, ಇದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೋರಾಟದ ಮುಂದಾಳತ್ವವನ್ನು ಹಾಗೂ ಸರ್ಕಾರಗಳ ಜೊತೆಗೆ ಸಂಪರ್ಕ ಸಾಧಿಸುವ ಕೆಲಸವನ್ನು ಮಾಜಿ ಸಚಿವರುಗಳಾದ ಹೆಚ್. ಆಂಜನೇಯ ಹಾಗೂ ಎ.ನಾರಾಯಣಸ್ವಾಮಿ ಮಾಡಬೇಕು. ನಾವೆಲ್ಲರೂ ಅವರ ಜೊತೆ ಇರುತ್ತೇವೆ ಎಂದರು. ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್ ಮಾತಾಡಿ, ರಾಜ್ಯದಲ್ಲಿರುವ ಮಾದಿಗ ಹೋರಾಟದ ಸಂಘಟನೆಗೆ ಮಾಜಿ ಸಚಿವರಾದ ಹೆಚ್. ಆಂಜನೇಯ ಮತ್ತು ಎ. ನಾರಾಯಣಸ್ವಾಮಿ ಚಾಲನೆ ಕೊಡಬೇಕು.ನೂರಾರು ಸಂಘಟನೆಗಳಿದ್ದರು, ರಾಜ್ಯಮಟ್ಟದ ಸಂಘಟನೆ ಇಲ್ಲ.ನಮ್ಮ ಸಮುದಾಯದ ಉದ್ದಾರಕ್ಕೆ, ಅಭಿವೃದ್ದಿ ಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಹೋರಾಟವನ್ನು ಬಳಸೋಣ,ಇನ್ನು ನಮ್ಮ ನಮ್ಮಲ್ಲೆ ಕಿತ್ತಾಡುವುದನ್ನು ಬಿಡಬೇಕು. 25 ವರ್ಷಗಳ ಕಾಲ ನಮ್ಮ ಸಮುದಾಯದ ನಾಯಕನನ್ನು ಆಯ್ಕೆ ಮಾಡಿ, ಚುನಾವಣೆಯಲ್ಲಿ ಎಲ್ಲರೂ ಅಮಿಷಕ್ಕೆ ಬಲಿಯಾಗುತ್ತಾರೆ, ಆದರೆ ಅವರಿಗೆ ಬೇಕಾದವರನ್ನು ಆಯ್ಕೆ ಮಾಡುತ್ತಾರೆ. ಆದರೆ ಮಾದಿಗ ಸಮುದಾಯದವರು ಮಾತ್ರ ಹಾಗೆ ಮಾಡುವುದಿಲ್ಲ, ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ, ಸಮಾಜ ಕಲ್ಯಾಣ ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಬಿಎನ್ ಚಂದ್ರಪ್ಪ, ಸಂಸದ ಗೋವಿಂದಕಾರಜೋಳ, ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿಎಸ್ ಮಂಜುನಾಥ್, ಸರ್ಕಾರಿ ನೌಕರರು ಸೇರಿದಂತೆ ಇನ್ನಿತರರು ಇದ್ದರು. ಇದೇ ಸಮಯದಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.