ಸೊಳ್ಳೆ ಉತ್ಪತ್ತಿ ತಾಣ ನಾಶ ಪಡಿಸಿ, ಡೆಂಗ್ಯೂ ನಿಯಂತ್ರಿಸಿ: ಸಚಿವ ಡಿ. ಸುಧಾಕರ್ ಸೂಚನೆ

ರಾಜ್ಯ

ಸೊಳ್ಳೆ ಉತ್ಪತ್ತಿ ತಾಣ ನಾಶ ಪಡಿಸಿ, ಡೆಂಗ್ಯೂ ನಿಯಂತ್ರಿಸಿ: ಸಚಿವ ಡಿ. ಸುಧಾಕರ್ ಸೂಚನೆ

 

 

ಚಿತ್ರದುರ್ಗ: ಡೆಂಗ್ಯೂ ನಿಯಂತ್ರಣಕ್ಕಾಗಿ ಜಿಲ್ಲೆಯಾದ್ಯಂತ ನಿರಂತರವಾಗಿ ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಡೆಂಗ್ಯೂ  ಜ್ವರದ ಮುಂಜಾಗ್ರತೆ ಹಾಗೂ ನಿಯಂತ್ರಣ ಕಾರ್ಯಗಳ ಹಿನ್ನಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ಸಲುವಾಗಿ ಚರಂಡಿ ಸ್ವಚ್ಛತೆಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ವಾರಕೊಮ್ಮೆ ಚರಂಡಿಗಳ ಸ್ವಚ್ಚತೆ ಮಾಡಿಸಬೇಕು. ಸೊಳ್ಳೆ ನಿಯಂತ್ರಣಕ್ಕೆ ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವ ಡಿ.ಸುಧಾಕರ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ ಎಂದು ಸಾಕಷ್ಟು ದೂರುಗಳು ಬರುತ್ತಿವೆ. ನಗರಸಭೆಯೊಂದಿಗೆ ಸಮನ್ವಯ ಮಾಡಿಕೊಂಡು, ಸ್ವಚ್ಛತೆಗೆ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕಾಗಿ ಲಾರ್ವಾ ಸಮೀಕ್ಷೆ ನಡೆಸಿ, ಲಾರ್ವಾ ನಾಶ ಚಟುವಟಿಕೆ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಡೆಂಗ್ಯೂ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ.  ಡೆಂಗ್ಯೂ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ವಿಶೇಷವಾಗಿ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮಳೆಗಾಲದ ನಂತರ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗಲಿವೆ. ಡೆಂಗ್ಯೂ ಜ್ವರ ಹರಡದಂತೆ ಹಾಗೂ ಸೊಳ್ಳೆಗಳು ಹೆಚ್ಚಾಗದಂತೆ ನಿಯಂತ್ರಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ. ಹಾಗಾಗಿ ಡೆಂಗ್ಯೂ ನಿಯಂತ್ರಣಕ್ಕಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಡೆಂಗ್ಯೂ ಪರೀಕ್ಷೆಗೆ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರವೇ ಟೆಸ್ಟ್ ಮಾಡಬೇಕು. ಡೆಂಗ್ಯೂ ಜ್ವರದ ಚಿಕಿತ್ಸೆಗೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ 10 ರಿಂದ 15 ಹಾಸಿಗೆಗಳನ್ನು ಮೀಸಲಿಡಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಲಾರ್ವಾ ಸಮೀಕ್ಷೆ ನಡೆಸಿ, ಸೊಳ್ಳೆಗಳ ಉತ್ಪತ್ತಿಗಳ ತಾಣಗಳನ್ನು ನಾಶ ಪಡಿಸಲಾಗುತ್ತಿದೆ. ಚಿತ್ರದುರ್ಗ ನಗರ ಪ್ರದೇಶದಲ್ಲಿ ಗುರುತಿಸಲಾಗಿರುವ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನಿರಂತರವಾಗಿ ಲಾರ್ವಾ ಸಮೀಕ್ಷೆ ನಡೆಸಿ, ಡೆಂಗ್ಯೂ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಜಿಲ್ಲೆಯಲ್ಲಿ ಈ ಬಾರಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿವೆ. ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ ಅವರು, ಶುದ್ಧ ಕುಡಿಯುವ ನೀರು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ದುರಸ್ತಿಗೆ ಬಂದಿರುವ ಆರ್.ಓ.ಘಟಕಗಳನ್ನು ತಕ್ಷಣ ರಿಪೇರಿ ಮಾಡಿ, ಸಾರ್ವಜನಿಕರಿಗೆ ನಿರಂತರವಾಗಿ ಶುದ್ಧ ನೀರು ಪೂರೈಕೆ ಮಾಡಬೇಕು, ಈ ರೀತಿ ಆದಾಗ, ಸಾರ್ವಜನಿಕರು ವಿನಾಕಾರಣ ನೀರು ಸಂಗ್ರಹಿಸಿ ಇಡುವುದು ತಪ್ಪಲಿದ್ದು, ಸೊಳ್ಳೆಗಳು ಕೂಡ ಹೆಚ್ಚಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್.ಓ.ಘಟಕಗಳು ಎಷ್ಟು, ಎಷ್ಟು ಘಟಕಗಳು ದುರಸ್ತಿಗೆ ಬಂದಿವೆ ಎಂಬುವುದರ ಕುರಿತು ವರದಿ ನೀಡಿ, ಆರ್.ಓ. ಘಟಕಗಳ ಹಳೆಯ ಯಂತ್ರಗಳ ತೆಗೆದು ಹಾಕಿ ಹೊಸ ಯಂತ್ರಗಳ ಅಳವಡಿಕೆಗೆ ಕ್ರಮವಹಿಸಬೇಕು. ಕಾರ್ಯನಿರ್ವಹಣೆ ಮಾಡುತ್ತಿರುವ ಎಲ್ಲ ಆರ್.ಓ.ಘಟಕಗಳ ನೀರಿನ ಮಾದರಿ ಪರೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು  ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲ ಮಾದರಿಯ ನೀರಿಗೂ ಒಂದೇ ರೀತಿಯ ಯಂತ್ರಗಳ ಅಳವಡಿಕೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ. ನೀರಿನ ಮಾದರಿಗೆ ಅನುಗುಣವಾಗಿ ಹೊಸ ರೀತಿಯ ಯಂತ್ರಗಳ ಅಳವಡಿಕೆ ಮಾಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶೀ,  ಡೆಂಗ್ಯೂ ನಿಯಂತ್ರಣ ಕಾರ್ಯಗಳಿಗೆ ನೇಮಕವಾಗಿರುವ ತಾಲ್ಲೂಕು ನೋಡಲ್ ಅಧಿಕಾರಿಗಳು, ತಹಶೀಲ್ದಾರ್‍ಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *