ಚಿತ್ರದುರ್ಗದಲ್ಲಿ ರಾಜೀ ಸಂಧಾನದ ಮೂಲಕ‌ ಇತ್ಯರ್ಥವಾದ ಸುಪ್ರೀಕೋರ್ಟ್ ಪ್ರಕರಣ

ರಾಜ್ಯ

ವಿಶೇಷ ಲೋಕ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ರಾಜೀ ಸಂಧಾನ
ಕೆ.ಎಸ್.ಆರ್.ಟಿ. ಬಸ್ ಅಪಘಾತ : ಬಾಧಿತ ಮಹಿಳೆಗೆ ರೂ.7,51,990 ಪರಿಹಾರಕ್ಕೆ ಒಪ್ಪಿಗೆ

 

 

ಚಿತ್ರದುರ್ಗ : ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಳೆದ 2018 ಸೆಪ್ಟೆಂಬರ್ 12 ರಂದು ಜರುಗಿದ ಅಪಘಾತದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಚಿತ್ರದುರ್ಗ ತಾಲ್ಲೂಕಿನ ಬೊಗಳೇರಹಟ್ಟಿ ಗ್ರಾಮದ ರಂಗಮ್ಮ ಎಡ ಪಾದವನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದರು.
ಪ್ರಕರಣದ ಕುರಿತು ರಂಗಮ್ಮ ಚಿತ್ರದುರ್ಗ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ ವಿವಾದ ಆಲಿಸಿದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಬಾಧಿತ ಮಹಿಳೆಗೆ ರೂ.2,00,000 ಪರಿಹಾರ ನೀಡಲು ಆದೇಶಿಸಿತ್ತು. ಈ ಆದೇಶ ವಿರುದ್ದ ರಂಗಮ್ಮ ಉಚ್ಚ ನ್ಯಾಯಾಲಯದಲ್ಲಿ ಪರಿಹಾರ ಮೊತ್ತ ಹೆಚ್ಚಿಸಲು ಮೇಲ್ಮನವಿ ಸಲ್ಲಿಸಿದ್ದರು. ಉಚ್ಚನ್ಯಾಯಾಲಯ, ಪ್ರಕರಣದಲ್ಲಿ ಬಾಧಿತ ಮಹಿಳೆಗೆ ರೂ.4,51,990 ಪರಿಹಾರ ನೀಡಲು ಆದೇಶಿಸಿತ್ತು. ಈ ಆದೇಶದ ವಿರುದ್ದ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ ರಂಗಮ್ಮ ಇನ್ನೂ ಹೆಚ್ಚಿನ ಪರಿಹಾರ ಮೊತ್ತ ಕೋರಿದ್ದರು. ಸರ್ವೋಚ್ಛ ನ್ಯಾಯಾಲಯ ಇದೇ ಜುಲೈ 29 ರಿಂದ ಆಗಸ್ಟ್ 03 ವರೆಗೆ ನಡೆಯಲಿರುವ ವಿಶೇಷ ಲೋಕ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಗೊಳಿಸಲು, ಪಕ್ಷಗಾರರ ನಡುವೆ ರಾಜಿ ಸಂಧಾನ ಮಾಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿಕೊಟ್ಟಿತ್ತು. ಇದರಂತೆ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಪಕ್ಷಗಾರರಿಗೆ ಶುಕ್ರವಾರ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ ಕರೆಸಿ ರಾಜೀ ಸಂಧಾನಕ್ಕೆ ಮನ ಒಲಿಸಿದರು. ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ರಂಗಮ್ಮನಿಗೆ ಉಚ್ಚನ್ಯಾಯಾಲಯದ ಆದೇಶದ ರೂ.4,51,990 ಪರಿಹಾರದ ಜೊತೆಗೆ ಹೆಚ್ಚುವರಿಯಾಗಿ ರೂ.3,00,000 ಪರಿಹಾರ ನೀಡಲು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಪರಿಹಾರ ಮೊತ್ತಕ್ಕೆ ಇಬ್ಬರೂ ಪಕ್ಷಗಾರರು ಒಪ್ಪಿಗೆ ಸೂಚಿಸಿ ರಾಜೀ ಸಂಧಾನ ಮೂಲಕ ವಿಶೇಷ ಲೋಕ ಅದಾಲತ್‍ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳಲಿದ್ದಾರೆ. ರಾಜೀ ಸಂಧಾನಕ್ಕೆ ಒಪ್ಪಿದ ರಂಗಮ್ಮ, ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಉಭಯ ಪಕ್ಷಗಾರರ ವಕೀಲರಿಗೆ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಧನ್ಯವಾದ ತಿಳಿಸಿದ್ದಾರೆ

Leave a Reply

Your email address will not be published. Required fields are marked *