ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಂಸದ ಕಾರಜೋಳ

ರಾಜ್ಯ

ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ

 

 

ಬರಪೀಡಿತ ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಜಿಲ್ಲೆಗೆ ವರದಾನವಾಗಿದೆ. ಯೋಜನೆ ಪೂರ್ಣಗೊಳಿಸಲು ಅಗತ್ಯ ಇರುವ ರೈತರ ಜಮೀನು ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ದೊರಕುವುದರೊಂದಿಗೆ, ಕುಡಿಯುವ ನೀರಿನ ಸಮಸ್ಯೆಯು ಪರಿಹಾರವಾಗುತ್ತದೆ. ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂಬುದು ನನ್ನ ಆಸೆಯಾಗಿದೆ. ಯೋಜನೆ ಪೂರ್ಣಗೊಳ್ಳದೆ ಚಿತ್ರದುರ್ಗ ಜಿಲ್ಲೆಗೆ ಬರ ಪೀಡಿತ ಎಂಬ ಹಣೆಪಟ್ಟಿ ಅಳಿಸಲು ಆಗುವುದಿಲ್ಲ. ಯೋಜನೆ ಅನುಷ್ಠಾನಕ್ಕಾಗಿ ಭೂಸ್ವಾಧೀನ ಅಧಿಕಾರಿಗಳಿಂದ, ವಿವಿಧ ಇಲಾಖೆ ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರ ಸಚಿವರವರೆಗೂ ಹಿಂದೆ ಬಿದ್ದು ಯೋಜನೆ ಕಾರ್ಯ ಮುಂದುವರಿಸುವುದಾಗಿ ತಿಳಿಸಿದರು.
2008-09 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5900 ಕೋಟಿಗೆ ಅನುಮೋದನೆ ನೀಡಲಾಗಿತ್ತು. 2015 ರಲ್ಲಿ ಯೋಜನೆಯ ವೆಚ್ಚವನ್ನು ರೂ.12,000 ಕೋಟಿ ಪರಿಷ್ಕøತಗೊಳಿಸಲಾಯಿತು. ಅಂತಿಮವಾಗಿ 2020 ರಲ್ಲಿ ಯೋಜನೆ ಪರಿಷ್ಕೃತ  ವೆಚ್ಚ ರೂ.21463 ಕೋಟಿಗೆ ಅನುಮೋದನೆ ನೀಡಿ ಸರ್ಕಾರ ಆದೇಶಿಸಿದೆ. ಸುಮಾರು ರೂ.10,000 ಕೋಟಿಯಷ್ಟು ಯೋಜನೆಗೆ ವೆಚ್ಚ ಮಾಡಲಾಗಿದೆ.  ಇನ್ನೂ ರೂ.11,500 ಕೋಟಿಯಷ್ಟು ಯೋಜನೆ ಕಾಮಗಾರಿ ಬಾಕಿಯಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ ರೂ.5300 ಕೋಟಿಯನ್ನು ಈ ಬಾರಿಯ ಬಜಟ್‍ನಲ್ಲೂ ಮುಂದುವರಿಸುವುದಾಗಿ ಕೇಂದ್ರ ಸರ್ಕಾರದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದಾರೆ. ತಾಂತ್ರಿಕವಾಗಿ ಯೋಜನೆಯ ವಿವರವನ್ನು ರಾಜ್ಯ ಸರ್ಕಾರ ನೀಡಿದ ತಕ್ಷಣವೇ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಪ್ರಸಕ್ತ ವರ್ಷದಲ್ಲಿ ರೂ.1400 ಕೋಟಿ ಯೋಜನೆಗೆ ನೀಡಿದೆ. ಗುತ್ತಿಗೆದಾರರ ಹಣ ಬಾಕಿ ಇರುವ ಕಾರಣ ಯೋಜನೆ ನಿಧಾನ ಗತಿಯಲ್ಲಿ ಸಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ, ಯೋಜನೆಗೆ ರೂ.3000 ಕೋಟಿ ಒದಗಿಸಲು ಕೇಳಿಕೊಂಡಿದ್ದೇನೆ ಎಂದರು.
ಯೋಜನೆ ಸುಗಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಗಮನಕ್ಕೆ ತಂದ ವಿಷಯಗಳ ಪರಿಹಾರಕ್ಕಾಗಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ, ಭೂಸ್ವಾಧೀನಾಧಿಕಾರಿ, ಅರಣ್ಯ ಇಲಾಖೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಮಾತನಾಡಿ, ಸಮಸ್ಯೆ ಬಗೆ ಹರಿಸುವಂತೆ ತಿಳಿಸಿದ್ದೇನೆ ಎಂದರು.
ಯೋಜನೆಗೆ ಅಗತ್ಯವಾದ 1,700 ಎಕೆರೆ ಭೂಮಿ ಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದೆ. ರೈತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇವುಗಳನ್ನು ತೆರುವು ಗೊಳಿಸಿ ಯೋಜನೆ ಅನುಷ್ಠಾನ ಮಾಡಲಾಗುವುದು. ರೈತರು ಪರಿಹಾರ ಪಡೆಯಲು ನಿರಾಕರಿಸಿದರೆ, ಆ ಹಣವನ್ನು ಜಿಲ್ಲಾಧಿಕಾರಿಗಳ ಖಾತೆಯಲ್ಲಿರಿಸಿ, ಪೊಲೀಸ್ ರಕ್ಷಣೆ ಪಡೆದು ಕಾಮಗಾರಿ ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಭೂಸ್ವಾಧೀನ ಕಾಯ್ದೆ ಅನುಸಾರ ಜಮೀನಿನ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಹಣ ನೀಡಲು ಸಾಧ್ಯವಿದೆ. ನಿಯಮಾನುಸಾರ ಪರಿಹಾರವನ್ನು ರೈತರು ಪಡೆದುಕೊಳ್ಳಬೇಕು. ನ್ಯಾಯಾಲಯ ಹೆಚ್ಚಿನ ಪರಿಹಾರ ನೀಡಲು ಆದೇಶಿಸಿದರೆ ಅದಕ್ಕನುಗುಣವಾಗಿ ಪರಿಹಾರ ಹಣ ರಾಜ್ಯ ಸರ್ಕಾರ ನೀಡಲಿದೆ. ಸದ್ಯ ನೀಡುವ ಪರಿಹಾರ ಹಣ ಪಡೆದು ಯೋಜನೆ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು ಎಂದು ರೈತ ಬಾಂಧವರಿಗೂ ವಿನಂತಿ ಮಾಡುತ್ತೇನೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು.
ಸುಮಾರು ರೂ.1,700 ಕೋಟಿಯಷ್ಟು ಗುತ್ತಿದಾರರ ಪಾವತಿ ಬಾಕಿಯಿದೆ. ಇದರಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಇದರೊಂದಿಗೆ ಭೂಸ್ವಾಧೀನವು ಸೇರಿ ರೂ.2000 ಕೋಟಿಯಷ್ಟು ಯೋಜನೆಯ ಪಾವತಿ ಬಾಕಿಯಿದೆ. ಕೇಂದ್ರ ಸರ್ಕಾರ ನೀಡುವ ರೂ.5,300 ಕೋಟಿ ಹಣವನ್ನು ಪ್ರತ್ಯೇಕ ಖಾತೆಯಲ್ಲಿ ನಿರ್ವಹಿಸಬೇಕಿದೆ.  ಈಗಾಗಲೇ ಗುತ್ತಿಗೆ ನೀಡಿರುವ ಕಂಪನಿಗಳಿಗೆ ನಿಯಮಾನುಸಾರ, ಪತ್ರ ವ್ಯವಹಾರ, ನೋಟಿಸು ನೀಡಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಾಗದಂತೆ ಗುತ್ತಿಗೆಯನ್ನು ರದ್ದುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮವರ ಪ್ರಶ್ನೆಗೆ ಸಂಸದ ಗೋವಿಂದ ಎಂ.ಕಾರಜೋಳ ಉತ್ತರಿಸಿದರು.
ತುಂಗಾ ಜಲಾಶಯದ ಹಿನ್ನಿರಿನ ಮುಳುಗಡೆ ಪ್ರದೇಶದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಟವರ್‍ಗಳು ಹಾದು ಹೋಗಲಿವೆ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಬೇಕು. ಈ ಕುರಿತು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶೀಘ್ರವೇ ಅನುಮತಿ ನೀಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಭದ್ರಾ ಮೇಲ್ದಂಡೆ ಯೋಜನೆ ಪ್ರಗತಿ ಪರಿಶೀಲನೆಗಾಗಿ ಎಲ್ಲಾ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಸಭೆ ಕರೆಯುವಂತೆ ಸೂಚನೆ ತಿಳಿಸಿದ್ದೇನೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರ ಎಂ.ಹೆಚ್.ಲಮಾಣಿ ಸೇರಿದಂತೆ ಮತ್ತಿರರು ಇದ್ದರು.

Leave a Reply

Your email address will not be published. Required fields are marked *