ಬಿಜೆಪಿ ದ್ವೇಷ ನಡೆಯನ್ನು ಪ್ರಜ್ಞಾವಂತ ಮತದಾರರು ವಿರೋಧಿಸಿದ್ದಾರೆ

ರಾಜ್ಯ

 

ಬಿಜೆಪಿ ದ್ವೇಷ ನಡೆಗೆ ಪ್ರಜ್ಞಾವಂತ ಮತದಾರರು ವಿರೋಧ

ಮಾಜಿ ಸಚಿವ ಎಚ್.ಆಂಜನೇಯ ಅಭಿಮತ

 

ಪ್ರಜ್ಞಾವಂತರು, ಪ್ರಬುದ್ಧರು, ಶಿಕ್ಷಿತವಂತರ ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಗುರುಗಳು ಮೆಚ್ಚುಗೆಯ ಮುದ್ರೆ ಒತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಲವತ್ತು ವರ್ಷಗಳಿಂದಲೂ ಬಿಜೆಪಿ ಹಿಡಿತ ಸಾಧಿಸಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಗೆದ್ದಿರುವುದು, ಶಿಕ್ಷಿತ ಮತದಾರರು ಬಿಜೆಪಿಯ ವಂಚನೆ, ಸುಳ್ಳು ಭರವಸೆ, ಪೊಳ್ಳು ಮಾತು, ದ್ವೇಷದ ಹೇಳಿಕೆಗಳಿಗೆ ಬೇಸತ್ತಿರುವ ಸ್ಪಷ್ಟ ಸಂದೇಶ ಹೊರಬಿದ್ದಿದೆ ಎಂದಿದ್ದಾರೆ.

ರಾಜ್ಯದಲ್ಲಿ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜಾರಿ, ಶಿಕ್ಷಕರ ಪರ ನೀತಿಗಳು, ಶಿಕ್ಷಕರ ನೇಮಕಾತಿ, ಶೈಕ್ಷಣಿಕ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡಿದ ಕೊಡುಗೆ ಅರಿತು ಬದಲಾವಣೆ ನಿರ್ಧಾರ ಕೈಗೊಳ್ಳುವ ಮೂಲಕ ನಾಡಿಗೆ ಬಿಜೆಪಿ ಪಕ್ಷವೇ ದೊಡ್ಡ ಅಪಾಯ ಎಂಬ ಸಂದೇಶವನ್ನು ಶಿಕ್ಷಕರು ನೀಡಿದ್ದಾರೆ ಎಂದು ಹೇಳಿದ್ದಾರೆ.

 

 

ಯಾದವ ಸಮುದಾಯದ ದಿಗ್ಗಜ ನಾಯಕ ದಿವಂಗತ ಎ.ಕೃಷ್ಣಪ್ಪ ಕುಟುಂಬದ ಸದಸ್ಯ ಡಿ.ಟಿ.ಶ್ರೀನಿವಾಸ್, ಶಿಕ್ಷಕರು, ವಿದ್ಯಾವಂತ ಕ್ಷೇತ್ರದಲ್ಲಿ ಆಘಾದ ಬದಲಾವಣೆ ತರಬೇಕೆಂಬ ಉತ್ಸಾಹ ಹೊಂದಿರುವ ಯುವ ರಾಜಕಾರಣಿ. ಅವರ ಗೆಲುವು ವಿಧಾನಪರಿಷತ್‍ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರ ಹಿತ ಕಾಯುವ ಹಾಗೂ ಜಾತ್ಯತೀತ ತತ್ವದಡಿ ಆಡಳಿತ ನಡೆಸುವ ಪಕ್ಷ. ದೇಶದಲ್ಲೂ ಕೂಡ ಕಾಂಗ್ರೆಸ್ ಪಕ್ಷದ ಪರ ಅಲೆ ಪ್ರಾರಂಭವಾಗಿದ್ದು, ರಾಹುಲ್ ಗಾಂಧಿ ನಾಯತ್ವವನ್ನು ಜನರು ಒಪ್ಪಿಕೊಂಡಿರುವುದು ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟಗೊಂಡಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರವನ್ನೇ ವಿಷದ ವರ್ತುಲಕ್ಕೆ ಸಿಲುಕಿಸುವ ಬಿಜೆಪಿ ಪ್ರಯತ್ನಕ್ಕೆ ಶಿಕ್ಷಕ ವರ್ಗ ಈ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಮೂಲಕ ದ್ವೇಷದ ನಡೆ ಸಹಿಸುವುದಿಲ್ಲ ಎಂಬ ಉತ್ತರ ನೀಡಿದ್ದಾರೆ ಎಂದಿದ್ದಾರೆ.

ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಎಲ್ಲ ಕ್ಷೇತ್ರಗಳನ್ನು ದುರ್ಬಳಕೆ ಮಾಡಿಕೊಂಡು ಜನರಲ್ಲಿ ಸುಳ್ಳುಗಳನ್ನು ನಿರಂತರ ಹರಡುತ್ತಿದ್ದರೂ ಶಿಕ್ಷಕರು ಕಿವಿಯಾಗದೇ ಭಾಜಪ ಕುತಂತ್ರವನ್ನು ಧಿಕ್ಕರಿಸಿ, ಕಾಂಗ್ರೆಸ್ ಆಡಳಿತವೇ ದೇಶಕ್ಕೆ ಒಳಿತು ಎಂಬ ಅಭಿಪ್ರಾಯ ನೀಡಿದ್ದಾರೆ ಎಂದಿದ್ದಾರೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪುಲ್ವಾಮ ದುರ್ಘಟನೆಯಲ್ಲಿ ದೇಶಕ್ಕೆ ಪ್ರಾಣ ಅರ್ಪಿಸಿದ ಯೋಧರ ಪಾರ್ಥಿವ ಶರೀರದ ಮೇಲೆ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ, ಸೈನಿಕ ಕ್ಷೇತ್ರದ ಬಲ ಕುಗ್ಗಿಸುವ ಅಗ್ನಿಪಥ ಹಾಗೂ ಕೃಷಿ, ಕಾರ್ಮಿಕರ ವಿರೋಧಿ ನೀತಿ ಜಾರಿಗೆ ತಂದು ದೇಶದಲ್ಲಿ ಜನರ ವಿರೋಧ ಕಟ್ಟಿಕೊಂಡಿತು.

ಈ ಬಾರಿ ಸೋಲಿನ ಮುನ್ಸೂಚನೆ ಅರಿತು ತರಾತುರಿಯಲ್ಲಿ ಪೂರ್ಣ ನಿರ್ಮಾಣಗೊಳ್ಳದ ರಾಮಮಂದಿರದಲ್ಲಿ ಬಾಲರಾಮನ ಪ್ರತಿಮೆ ಪ್ರತಿಷ್ಠಾಪಿಸಿ ದೇವರ ಹೆಸರಲ್ಲಿ ಮತಗಳಿಕೆಗೆ ಪ್ರಯತ್ನ ನಡೆಸಿ, ದೇಶ ಅದರಲ್ಲೂ ರಾಮಮಂದಿರ ನಿರ್ಮಾಣಗೊಂಡಿರುವ ಉತ್ತರಪ್ರದೇಶ, ಅಯೋಧ್ಯೆಯಲ್ಲಿಯೇ ಬಿಜೆಪಿ ಧೂಳಿಪಟವಾಗಿರುವುದು ಜನ ಬಿಜೆಪಿ ಕುತಂತ್ರ ಅರಿತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ದೇಶ, ಯೋಧ, ರೈತ, ಕಾರ್ಮಿಕ, ದೇವರು, ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಭಾರತೀಯ ಮತದಾರರು ಎಂದಿಗೂ ಒಪ್ಪುವುದಿಲ್ಲ ಎಂಬುದು ಈ ಬಾರಿಯ ಫಲಿತಾಂಶ ಉತ್ತರವಾಗಿದೆ. ಅದರಲ್ಲೂ ನಾಡಿಗೆ ಉತ್ತಮ ಪ್ರಜೆಗಳನ್ನು ಕೊಡುಗೆ ನೀಡುವ ದೇಶದ ನಿರ್ಮಾತೃಗಳಾದ ಶಿಕ್ಷಕರು ಧರ್ಮ, ದೇವರ ಹೆಸರಲ್ಲಿ ಭಾರತೀಯರನ್ನು ಇಬ್ಭಾಗ ಮಾಡುವುದನ್ನು ಸಹಿಸಿಕೊಳ್ಳುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ, ದುಡಿಯುವ ಕೈಗಳಿಗೆ ಕೆಲಸ, ಕೈಗಾರಿಕೆ, ನೀರಾವರಿ ಕ್ಷೇತ್ರ ಬಲವರ್ಧನೆಗಳಷ್ಟೇ ಶಿಕ್ಷಕರ ಆದ್ಯತೆ ವಿಷಯ. ಆದ್ದರಿಂದ ದೇಶದ ಅಭಿವೃದ್ಧಿಗೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವನ್ನು ಶಿಕ್ಷಕರು ಗೆಲ್ಲಿಸಿದ್ದಾರೆ. ಈ ಮೂಲಕ ಉತ್ತಮ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಶಿಕ್ಷಕರ ಈ ನಿರ್ಧಾರ ರಾಜ್ಯದಲ್ಲಿ ಕೆಲವೇ ತಿಂಗಳುಗಳಲ್ಲಿ ನಡೆಯುವ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿಗೆ ಶುಭ ಸೂಚನೆ ಆಗಿದೆ. ಆದ್ದರಿಂದ ಕಾರ್ಯಕರ್ತರು, ಮುಖಂಡರು ಈಗಿನಿಂದಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಬೇಕು. ಮನೆ ಮನೆಗೆ ತೆರಳಿ ರಾಜ್ಯ ಸರ್ಕಾರದ ಸಾಧನೆ ಕುರಿತು ಮನದಟ್ಟು ಮಾಡಬೇಕು ಎಂದು ಎಚ್. ಆಂಜನೇಯ ಹೇಳಿದ್ದಾರೆ.

Leave a Reply

Your email address will not be published. Required fields are marked *