ಮಹಿಳೆಯರು ಸ್ವಾವಲಂಬಿ ಬದುಕು‌ ನೆಡೆಸಲು ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದೆ

ರಾಜ್ಯ

ನರೇಗಾ ಕೂಲಿಗಾರರ ಆರೋಗ್ಯ ವಿಚಾರಿಸಿದ ಜಿ.ಪಂ ಸಿಇಒ

 

 

ಮೊಳಕಾಲ್ಮುರು ತಾಲ್ಲೂಕು ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಳ್ಳಿ ಕೆರೆ ಅಂಗಳದಲ್ಲಿ ಹೂಳು ತೆಗೆಯುವ ಕಾಮಕಾರಿ ಮತ್ತು ಕೋನಪುರ ಗ್ರಾಮದ ಸರ್ಕಾರಿ ಹಳ್ಳ ಹೂಳು ತೆಗೆಯುವ ಕಾಮಗಾರಿ ಹಾಗೂ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇರಹಳ್ಳದಲ್ಲಿ ಹೂಳು ತೆಗೆಯುವ ಚಾಲನೆಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ ಹೂಳು ತೆಗೆಯುತ್ತಿದ್ದ ಕೂಲಿಗಾರರೊಂದಿಗೆ ಚರ್ಚಿಸಿದರು.
ಜಾಬ್‍ಕಾರ್ಡ್ ಹೊಂದಿರುವ ಕೂಲಿಗಾರರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಂದು ಆರ್ಥಿಕ ವರ್ಷಕ್ಕೆ 100 ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿ ಯಾರು ಗುಳೆ ಹೊಗದೇ ತಮ್ಮ ತಮ್ಮ ಗ್ರಾಮಗಳಲ್ಲಿರುವ ಕೆರೆ, ಕಾಲುವೆ, ಗೋಕಟ್ಟೆ ಮತ್ತು ಚೆಕ್ ಡ್ಯಾಂ ಹೂಳು ತೆಗೆಯಬಹುದು. ಮಹಿಳೆಯರು ಮತ್ತು ಪುರುಷರು ಕೂಲಿಕೆಲಸ ಮಾಡಿ ದಿನಕ್ಕೆ ರೂ.349/- ಗಳಿಸಿ, ಇಬ್ಬರಿಗೂ ಸಮಾನ ಕೂಲಿ ಇರುವುದರಿಂದ ಗ್ರಾಮೀಣ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಮಹಿಳೆಯರು ಹೆಚ್ಚಿನ ಸ್ವಾವಲಂಬನೆಯಿಂದ ಬದುಕಲು ಈ ಯೋಜನೆ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಮಹಿಳಾ ನರೇಗಾ ಕೂಲಿಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಕೂಲಿಗಾರರು ಸ್ವಂತ ಜಮೀನು ಹೊಂದಿದ್ದರೆ ಅಲ್ಲಿಯೂ ಕೂಡ ನರೇಗಾ ಯೋಜನೆಯಡಿ ಕೆಲಸ ಮಾಡಿಕೊಳ್ಳಬಹುದು. ಕೂಲಿಗಾರರ ಕುಟುಂಬದಲ್ಲಿ ಮೂರು ವರ್ಷದೊಳಗಿನ ಮಕ್ಕಳಿದ್ದಲ್ಲಿ ಅವರ ಹಾರೈಕೆಗಾಗಿ “ಕೂಸಿನ ಮನೆ” ಯನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಯಲ್ಲಿ ತೆರೆಯಲಾಗಿದ್ದು, ಮಕ್ಕಳನ್ನು ಅಲ್ಲಿ ಬಿಟ್ಟು ನಿರ್ಭಿತಿಯಿಂದ ಕೆಲಸ ಮಾಡಬಹುದಾಗಿದೆ. ಕೂಸಿನ ಮನೆಯಲ್ಲಿ ತರಬೇತಿ ಪಡೆದ ಮಹಿಳಾ ಕೇರ್ ಟೇಕರ್ಸ್ ಅವರು ಮಕ್ಕಳನ್ನು ತಾಯಿಯಂತೆ ನೋಡಿಕೊಳ್ಳುತ್ತಾರೆ. ಕೆಲಸ ಮುಗಿದ ಮೇಲೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದು ಎಂದು ತಿಳಿಸಿದರು.
ಕೂಲಿಗಾರರ ಕುಂದು ಕೊರತೆಗಳಿಗೆ ಪ್ರತಿ ತಿಂಗಳು ಅಥವಾ 15 ದಿನಕ್ಕೊಮ್ಮೆ ನಡೆಯುವ “ರೋಜ್‍ಗಾರ್” ಸಭೆಯಲ್ಲಿ ಭಾಗವಹಿಸಿ, ಸಮಸ್ಯೆಗಳನ್ನು ಹೇಳಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಅವರು, ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳಾ ಕೂಲಿಗಾರರಿಗೆ ತಮ್ಮ ತಮ್ಮ ಖಾತೆಗಳಿಗೆ ಸರಿಯಾದ ಸಮಯಕ್ಕೆ ಕೂಲಿ ಹಣ ಬೀಳುತ್ತಿದೆಯಾ, ಪಿಡಿಒ ಅವರು ಸರಿಯಾಗಿ ಕೆಲಸ ನೀಡುತ್ತಾರಾ ಎಂಬುದಾಗಿ ವಿಚಾರಿಸಿದರು. ನಮಗೆ ಯಾವುದೇ ತೊಂದರೆ ಇಲ್ಲ ನಮಗೆ ಸರಿಯಾಗಿ ಕೆಲಸ ಕೊಟ್ಟು, ಕೂಲಿಯನ್ನು ನಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾರೆ. ನಾವು ಬೇರೆ ಕಡೆ ವಲಸೆ ಹೋಗದೇ ನಮ್ಮೂರಲ್ಲೇ ಉದ್ಯೋಗ ಖಾತ್ರಿ ಕೆಲಸ ಮಾಡ್ತಿವಿ. ಕೆರೆ-ಕಾಲುವೆಗಳನ್ನು ಹೂಳೆತ್ತುತ್ತಿವಿ ಎಂದು ತಿಳಿಸಿದರು. ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಯಾವುದೋ ಒತ್ತಡದಲ್ಲಿ ಬಿಡುವಿಲ್ಲದೇ ಕೂಲಿಗಾರರು ಕೆಲಸ ಮಾಡುತ್ತಿರುತ್ತಾರೆ. ಅವರು ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಲಾರದಷ್ಟು ಉದಾಸೀನ ತೋರಿರುತ್ತಾರೆ. ಆದ್ದರಿಂದ ನರೇಗಾ ಯೋಜನೆಯಡಿ ಕೂಲಿಗಾರರಿಗೆ ಕೆಲಸ ಒದಗಿಸುವುದರ ಜೊತೆಗೆ ಆರೋಗ್ಯವನ್ನೂ ಕಾಪಾಡುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಅವರುಗಳಿಗೆ ಪ್ರಥಮವಾಗಿ ರಕ್ತದ ಒತ್ತಡ, ಶುಗರ್, ಮೈಯಲ್ಲಾದ ಗಾಯಗಳು ಇನ್ನೀತರೆ ಕಾಯಿಲೆಗಳ ಬಗ್ಗೆ ಪರೀಕ್ಷಿಸಲಾಗುತ್ತದೆ. ಕಾಮಗಾರಿ ಮಾಡುವ ವೇಳೆ ಗಾಯಗೊಂಡರೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ಕೂಲಿಗಾರರಿಗೆ ಅನುಕೂಲವಾಗುತ್ತದೆ. ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬಹುದು ಎಂಬುವುದರ ಬಗ್ಗೆ ತಿಳಿಸಿದ ಅವರು, ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಮೊಳಕಾಲ್ಮುರು ತಾ.ಪಂ ಇಒ ಪ್ರಕಾಶ್, ಜಿಲ್ಲಾ ಪಂಚಾಯಿತಿ ನರೇಗಾ ವಿಭಾಗದ ಎಡಿಪಿಸಿ ಮೋಹನ್, ಜಿಲ್ಲಾ ಐಇಸಿ ಸಂಯೋಜಕ ಎಂ.ಎಸ್.ರವೀಂದ್ರ ನಾಥ್, ಸಹಾಯಕ ನಿರ್ದೇಶಕ ಗಣೇಶ್, ಪಿಡಿಒ ಗುಂಡಪ್ಪ, ತಾಂತ್ರಿಕ ಸಂಯೋಜಕ ಮಂಜುನಾಥ್, ಎಂಐಎಸ್ ಸಂಯೋಜಕ ಮಧುಸೂಧನ್, ತಾಲ್ಲೂಕು  ಐಇಸಿ ದೇವರಾಜ್, ತಾಂತ್ರಿಕ ಸಹಾಯಕರು, ಬಿಎಫ್‍ಟಿಜಿಕೆ ಮತ್ತು ಕಾಯಕಬಂಧುಗಳು ಇದ್ದರು.

Leave a Reply

Your email address will not be published. Required fields are marked *