ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾಕೆ ಇಷ್ಟೊಂದು ಅಸಡ್ಡೆ

ರಾಜ್ಯ

ಬರಗಾಲಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಪರಿಹಾರ ನೀಡಬೇಕೆಂದು ತಿಂಗಳುಗಳಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಇಲ್ಲಿಯ ವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ ನರೇಂದ್ರ ಮೋದಿಯವರು ಕೀನ್ಯಾ ದೇಶದ ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ 250 ಮಿಲಿಯನ್ ಡಾಲರ್‌ಗಳಷ್ಟು ನೆರವು ನೀಡಿರುವುದನ್ನು ನೋಡಿದಾಗ ಸಹಜವಾಗಿಯೇ ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾಕೆ ಇಷ್ಟೊಂದು ಅಸಡ್ಡೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸ್ವತಂತ್ರ ದೇಶವಾಗಿ ರೂಪು ಪಡೆದ ದಿನದಿಂದಲೂ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ನೆರವು ನೀಡುವ ಪರಂಪರೆಯನ್ನು ಭಾರತ ಮುಂದುವರಿಸಿಕೊಂಡು ಬಂದಿದ್ದು ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಬೇರೆ ದೇಶಗಳ ಕಷ್ಟಕ್ಕೆ ನೆರವಾಗುವುದರ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ಇದೇ ಔದಾರ್ಯ ಮತ್ತು ಕಾಳಜಿಯನ್ನು ನಮ್ಮದೇ ದೇಶದ ರಾಜ್ಯಗಳ ಬಗ್ಗೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರು ತೋರುತ್ತಿಲ್ಲ ಎನ್ನುವುದಷ್ಟೇ ನಮ್ಮ ಪ್ರಶ್ನೆ.

 

 

ಕರ್ನಾಟಕ ರಾಜ್ಯ ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು ರಾಜ್ಯ ಸರ್ಕಾರ ತನ್ನ ಶಕ್ತಿ ಮೀರಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೇ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿಕೊಂಡು ಹೋಗಿ ವರದಿ ನೀಡಿದೆ. ರಾಜ್ಯ ಸರ್ಕಾರ ಕೂಡಾ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ನಮ್ಮ ಕೃಷಿ ಮತ್ತು ಕಂದಾಯ ಸಚಿವರಿಬ್ಬರೂ ದೆಹಲಿಗೆ ಭೇಟಿ ನೀಡಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಇಷ್ಟೆಲ್ಲ ಪ್ರಯತ್ನದ ಹೊರತಾಗಿಯೂ ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಭೆಯನ್ನೂ ಕರೆದಿಲ್ಲ. ಭೇಟಿಗೆ ಅವಕಾಶ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರಕ್ಕೂ ಇಲ್ಲಿಯ ವರೆಗೆ ಪ್ರತಿಕ್ರಿಯೆ ಇಲ್ಲ.

ಬರಗಾಲದಿಂದಾಗಿ ರಾಜ್ಯದ 48.19 ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಆಗಿರುವ ಬೆಳೆನಷ್ಟಕ್ಕಾಗಿ ಕನಿಷ್ಠ ರೂ.4,663 ಕೋಟಿ ರೂಪಾಯಿ ಪರಿಹಾರ ನೀಡುವ ಜೊತೆಯಲ್ಲಿ ಒಟ್ಟು ಬರ ಪರಿಹಾರಕ್ಕಾಗಿ ರೂ.18,171 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೇವೆ. ಆದರೆ ಇಲ್ಲಿಯ ವರೆಗೆ ನಯಾಪೈಸೆ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದರು.

Leave a Reply

Your email address will not be published. Required fields are marked *