ಜನ ಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ: ಮುಖ್ಯ ಮಂತ್ರಿ ಸಿದ್ದರಾಮಯ್ಯ

ರಾಜ್ಯ

ಜನರ ಕೆಲಸ ಮಾಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಪಕ್ಷ ರಾಜಕಾರಣ ಚುನಾವಣೆ ವೇಳೆ ಮಾತ್ರ ಮಾಡಬೇಕು, ಅಧಿಕಾರಿಗಳು ನಿರ್ಲಕ್ಷ್ಯ, ಉದಾಸೀನ ತೋರಿಸಿದರೆ ಜನರಿಗೆ ಸ್ಪಂದಿಸದಿದ್ದರೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹಿಸಲು ಸಾಧ್ಯವಿಲ್ಲ. ಜನ ಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದರು. ಅವರು ಉಡುಪಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜನಸ್ಪಂದನೆಗೆ ಸಾಕಷ್ಟು ಅಧಿಕಾರಿಗಳು ಇದ್ದಾರೆ. ಅಧಿಕಾರಿಗಳಿಗೆ ಸ್ಥಾನ, ಮಾನ, ಸಂಬಳ ಮತ್ತು ಸವಲತ್ತುಗಳು ಸಿಗುವುದು ಜನರ ತೆರಿಗೆ ಹಣದಿಂದ.
ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಭೇಟಿ ಕಡ್ಡಾಯವಾಗಿ ನೀಡಬೇಕು, ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ದೂರುಗಳು ಬಂದಾಗ ಮೊದಲು ಎಫ್ಐಆರ್ ದಾಖಲಿಸಿಕೊಳ್ಳಬೇಕು ನಂತರ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿ ಎಂದು ಸೂಚಿಸಿದರು.
ಮಳೆ ಅನಾಹುತಗಳಲ್ಲಿ ಪೂರ್ಣ ಮನೆ ಹಾನಿ ಆಗಿದ್ದರೆ ೫ ಲಕ್ಷ ರೂ ಪರಿಹಾರ ನೀಡಬೇಕು ಇದು ಸರ್ಕಾರದ ನಿರ್ಧಾರ. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ-ಇಲ್ಲವೋ, ಹಕ್ಕು ಪತ್ರ ಇದೆಯೋ-ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಿ. ಮೊದಲು ಮನೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾನಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಮೀಕ್ಷೆ ನಡೆಸಿ. ಬೆಳೆ ಹಾನಿಗೊಳಗಾದವರಿಗೆ ತಪ್ಪದೆ ಪರಿಹಾರ ಸಿಗಬೇಕು. ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ಬೆಳೆ ಹಾನಿ ಆದವರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಒಮ್ಮೆ ಬೆಳೆ ಪರಿಹಾರ ಕೊಟ್ಟ ಬಳಿಕ ಪರ್ಯಾಯ ಬೆಳೆ ಬೆಳೆಯಲು ಅಗತ್ಯವಾದ ಬೀಜ, ಗೊಬ್ಬರ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಿ. ಅಡಿಕೆ ಬೆಳೆಗೆ ಬಂದಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದರು.
೨ ವರ್ಷಗಳಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಸೂಚನೆ
ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲು ಸಂಕದಿಂದ ಆಗಿರುವ ಅನಾಹುತಗಳನ್ನು ತಪ್ಪಿಸಲು ಸೇತುವೆಗಳನ್ನು ನಿರ್ಮಿಸಬೇಕು. ನರೇಗಾ ಮತ್ತು ಲೋಕೋಪಯೋಗಿ ಜಂಟಿಯಾಗಿ ಸೇತುವೆಗಳನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿ ಮತ್ತು ಎರಡು ವರ್ಷಗಳಲ್ಲಿ ಸೇತುವೆ ನಿರ್ಮಾಣ ಕೆಲಸಗಳು ಮುಗಿಯುವ ರೀತಿಯಲ್ಲಿ ಕೆಲಸ ಮಾಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

 

 

Leave a Reply

Your email address will not be published. Required fields are marked *