ವಧುಗಳೇ ಸಿಗದ ಪರಿಸ್ಥಿತಿ‌ ನಿರ್ಮಾಣವಾಗಿದೆ

ರಾಜ್ಯ

ಕಳೆದ ಒಂದುವರೆ ಎರಡು ದಶಕಗಳ ಹಿಂದೆ ಚಾಲ್ತಿಯಲ್ಲಿದ್ದ ಹೆಣ್ಣು  ಭ್ರೂಣ ಹತ್ಯೆಯಂತಹ ಕಾನೂನು ಬಾಹಿರ ಕ್ರಮ ಅನುಸರಿಸಿದ ಹಿನ್ನೆಲೆಯಲ್ಲಿ ಇಂದು ಹೆಣ್ಣು ಮಕ್ಕಳ ಸಂತತಿ ಕಡಿಮೆಯಾಗಿ ವಧುಗಳೇ ಸಿಗದಂತಹ ಪರಿಸ್ಥಿತಿ  ಇತ್ತೀಚಿಗೆ  ಸೃಷ್ಟಿಯಾಗಿದೆ . ಈಗ ಕಠಿಣ ಕಾನೂನು ಕ್ರಮದಿಂದ ಅಂತ ಸ್ಥಿತಿಯಿಲ್ಲ ಎಂದು ದಾವಣಗೆರೆ  ವಿರಕ್ತಮಠ ಹಾಗೂ ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿಯವರು ವಿಷಾದ ವ್ಯಕ್ತಪಡಿಸಿದರು.

 

 

ಶ್ರೀಗಳು  ಚಿತ್ರದುರ್ಗದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ಬೆಂಗಳೂರು  ಗಾಂಧಿನಗರದ ಮರಾಠ ಮಂಡಲದಲ್ಲಿ ಏರ್ಪಡಿಸಿದ್ದ ಸರ್ವಧರ್ಮೀಯರ ವಧು ವರರ ರಾಜ್ಯಮಟ್ಟದ ಸಮಾವೇಶದ ಸಾನಿಧ್ಯ ವಹಿಸಿ  ಮಾತನಾಡಿದರು. ಕುಟುಂಬ ವ್ಯವಸ್ಥೆಯಲ್ಲಿ ಪ್ರಪಂಚಕ್ಕೆ ಮಾದರಿಯಾಗಿದ್ದ ಭಾರತವಿಂದು  ವಿದೇಶಿ ವ್ಯಾಮೋಹಕ್ಕೆ ಹಾತೊರೆತ್ತಿರುವುದು ಬೇಸರದ ಸಂಗತಿ. ಬರೀ ಹಣ ಅಂತಸ್ತಿಗಿಂತ , ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಯುವಕರು ಸೋಮಾರಿಗಳಾಗದೆ, ವರದಕ್ಷಿಣೆ ಕಿರುಕುಳ ಕೊಡದೆ, ಘನತೆಯಿಂದ ಬಾಳಬೇಕೆಂದು  ಹಿತನುಡಿದರು .ಜಾತಿ ಮತಕ್ಕಿಂತ ನೀತಿ ಅಗತ್ಯ. ಪ್ರಮುಖವಾಗಿ ಜಾತಕ ಗಣನೆಗೆ ತೆಗೆದುಕೊಳ್ಳದೆ ಹೊಂದಾಣಿಕೆ ಮುಖ್ಯ.  ಇಲ್ಲಿ ಸಂಸಾರ ವಿಘಟನೆಯಾಗುವುದು ಅತ್ತೆ  ಸೊಸೆಯರ ವಿರಸದಿಂದ, ಅವರು ಸ್ವಲ್ಪ  ತಾಳ್ಮೆ ಸಮಯದಿಂದ ಇದ್ದರೆ ಕುಟುಂಬ ಸುಸೂತ್ರವಾಗಿ ಸಾಗಲು ಸಾಧ್ಯ ಎಂದರು. ಚಿತ್ರದುರ್ಗ ಮಠ ಜಾತ್ಯಾತೀತ ಕಲ್ಯಾಣಮಹೋತ್ಸವ ಮಾಡಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೈಕೋರ್ಟ್ ನ್ಯಾಯವಾದಿಗಳಾದ ಜೆ.ಎಂ.ಅನಿಲ್ ಕುಮಾರ್ ಅವರು ಮಾತನಾಡಿ ಕುಟುಂಬ ವ್ಯವಸ್ಥೆಯಲ್ಲಿ ಮದುವೆ ಎನ್ನುವುದು ಮನುಷ್ಯನ ಬಾಳಿನಲ್ಲಿ ಪ್ರಮುಖ ಘಟ್ಟ.  ಅಂತಹ ವ್ಯವಸ್ಥೆಗೆ ಮುಂದಾಗಬೇಕೆಂಬ ಹಂಬಲದಿಂದ ಸೇರಿರುವ ನೀವು ನಿಮ್ಮ ಆಯ್ಕೆಯಲ್ಲಿ ಒಂದಲ್ಲ ಎರಡು ಮೂರು ಬಾರಿ ಆಲೋಚಿಸಿ ,ಪರಸ್ಪರ ಸಮಾಲೋಚಿಸಿ, ಆಯ್ಕೆ ಮಾಡಿಕೊಂಡು ಮದುವೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಸೌಧದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ಕೆ.ಎಂ. ವೀರಯ್ಯ ಹಾಗೂ ಬಸವೇಶ್ವರ ಮಾಹಿತಿ ಕೇಂದ್ರದ ವ್ಯವಸ್ಥಾಪಕರು ಹಾಗೂ ಸಂಘಟಕರು ಆದ ಜೆ.ಎಂ. ಜಂಬಯ್ಯ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹೆಸರಿಗೆ ತಕ್ಕ ಹಾಗೆ  ಬಸವಣ್ಣನವರ ನಿಜ ಆಶಯ ಎಂಬಂತೆ ಅನೇಕ ಜಾತಿ ಉಪಜಾತಿ, ಜನಾಂಗಗಳ ಪೋಷಕರು ಹಾಗೂ ಅವರ ಮಕ್ಕಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಮಾತನಾಡುವ, ಚರ್ಚಿಸುವ, ಆಪ್ತ ಸಮಾಲೋಚನೆಯಂತಹ ಕೆಲಸ  ಇಡೀ ದಿನ ನಡೆಯಿತು.
ಸಭಾ ಸಂಚಾಲನೆಯನ್ನು ನಿವೃತ್ತ ಅಧ್ಯಾಪಕ  ಬಸವರಾಜ್ ಹಾಗು ಮಾಂತೇಶ್  ನಿಟ್ಟುವಳ್ಳಿ ನೆರವೇರಿಸಿದರು. ಈ ಸಂದರ್ಭದಲ್ಲಿ ಬಸವನಗೌಡ್ರು, ಈ ಗೋಪಿನಾಥ್, ಕೆಎಸ್ಆರ್ ಟಿ ಸಿ ನೌಕರ ಬಸಯ್ಯ, ಕನ್ನಡ ಪರ ಸಂಘಟನೆಯ ಪ್ರಕಾಶ್ ,ಮಠದ ಮಲ್ಲಿಕಾರ್ಜುನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *