ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದಲ್ಲಿ ಅರ್ಜಿ ಸಲ್ಲಿಸಿ- ದಿವ್ಯಪ್ರಭು ಜಿ.ಆರ್.ಜೆ.

ಆರೋಗ್ಯ

ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದಲ್ಲಿ ಅರ್ಜಿ ಸಲ್ಲಿಸಿ- ದಿವ್ಯಪ್ರಭು ಜಿ.ಆರ್.ಜೆ.

ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ (ಎಪಿಕ್ ಕಾರ್ಡ್) ಬದಲಾವಣೆ ಅಥವಾ ಕಾರ್ಡ್ ಕಳೆದುಹೋಗಿದ್ದು, ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ ಸಂಬಂಧಪಟ್ಟ ಮತದಾರರು ಆಯಾ ಬಿಎಲ್‍ಒ (ಬೂತ್ ಮಟ್ಟದ ಅಧಿಕಾರಿ), ತಹಸಿಲ್ದಾರರ ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿ, ಉಚಿತವಾಗಿ ಹೊಸ ಕಾರ್ಡ್ ಪಡೆಯಬಹುದಾಗಿದೆ.  ಸಾರ್ವಜನಿಕರು ಹಣ ತೆತ್ತು, ಖಾಸಗಿಯವರ ಬಳಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಪಡೆಯಬಾರದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

 

 

ಚಳ್ಳಕೆರೆಯಲ್ಲಿ ಖಾಸಗಿ ಕಂಪ್ಯೂಟರ್ ಸೆಂಟರ್‍ವೊಂದರಲ್ಲಿ, 200 ರಿಂದ 300 ರೂ. ಹಣ ಪಡೆದು, ಮತದಾರರ ಗುರುತಿನ ಚೀಟಿ ತಯಾರಿಸಿ, ನೀಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ತಹಸಿಲ್ದಾರ್ ಎನ್. ರಘುಮೂರ್ತಿ ಅವರ ನೇತೃತ್ವದ ತಂಡವು ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ, ಅಲ್ಲಿ ಮತದಾರರ ಗುರುತಿನ ಚೀಟಿ ಮುದ್ರಣ ಮಾಡಿ ಸಾರ್ವಜನಿಕರಿಗೆ ನೀಡಿರುವ ಬಗ್ಗೆ ಪರಿಶೀಲಿಸಿದ್ದು, ಮತದಾರರ ಭಾವಚಿತ್ರವಿರುವ ಕೆಲವು ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ಕಂಪ್ಯೂಟರ್ ಸೆಂಟರ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.  ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.  ಸಾರ್ವಜನಿಕರು ತಮ್ಮ ಮತದಾರರ ಗುರುತಿನ ಚೀಟಿ ಪಡೆಯಲು, ಕಾರ್ಡ್ ಕಳೆದುಹೋಗಿದ್ದು ಹೊಸ ಕಾರ್ಡ್ ಪಡೆಯಬೇಕಿದ್ದಲ್ಲಿ ಅಥವಾ ಬದಲಿ ಕಾರ್ಡ್ ಪಡೆಯಬೇಕಿದ್ದಲ್ಲಿ, ಅಂತಹ ಮತದಾರರು ತಮ್ಮ ಅರ್ಜಿಯನ್ನು ಆಯಾ ಬಿಎಲ್‍ಒ (ಬೂತ್ ಮಟ್ಟದ ಅಧಿಕಾರಿ), ತಹಸಿಲ್ದಾರರ ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು.  ಈ ರೀತಿ ಅರ್ಜಿ ಸಲ್ಲಿಸಿದ ಮತದಾರರಿಗೆ ಹೊಸ ಎಪಿಕ್ ಕಾರ್ಡ್‍ಗಳನ್ನು ಅವರ ವಿಳಾಸಕ್ಕೆ ಉಚಿತವಾಗಿ ತಲುಪಿಸಲಾಗುವುದು.  ಇದಕ್ಕಾಗಿ ಮತದಾರರು ಯಾವುದೇ ಹಣ ನೀಡುವ ಅಗತ್ಯವಿರುವುದಿಲ್ಲ.

ಸಾರ್ವಜನಿಕರು, ವದಂತಿಗಳನ್ನು ನಂಬಿ, ಹಣ ಕೊಟ್ಟು ಖಾಸಗಿಯವರಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಮುಂದಾಗಬಾರದು.  ಇಂತಹ ಕಾರ್ಡ್‍ಗಳು ಅನಧಿಕೃತ ಕಾರ್ಡ್‍ಗಳಾಗಿದ್ದು, ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ.  ಹೀಗಾಗಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗಾಗಿ ಸಾರ್ವಜನಿಕರು ಖಾಸಗಿ ಕಂಪ್ಯೂಟರ್ ಸೆಂಟರ್ ಅಥವಾ ಖಾಸಗಿ ವ್ಯಕ್ತಿಗಳನ್ನು ಸಂಪರ್ಕಿಸಬಾರದು,  ಎಪಿಕ್ ಕಾರ್ಡ್‍ಗಾಗಿ ಸಂಬಂಧಪಟ್ಟ ಬಿಎಲ್‍ಒ, ತಹಸಿಲ್ದಾರ್ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿಯೇ ಅರ್ಜಿಯನ್ನು ಸಲ್ಲಿಸಿ, ಉಚಿತವಾಗಿ ಕಾರ್ಡ್ ಪಡೆಯಬಹುದು.   ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲ ಅಥವಾ ಸಂಶಯಗಳಿದ್ದಲ್ಲಿ ಮತದಾರರ ಸಹಾಯವಾಣಿ 1950 ಅಥವಾ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ 08194-222176 ಕ್ಕೆ ಕರೆಮಾಡಿ, ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *