ಚಿತ್ರದುರ್ಗದಲ್ಲಿ 164 ಬಾಲಗರ್ಭಿಣಿಯರು ಪತ್ತೆ ಎಫ್.ಐ.ಆರ್ ದಾಖಲಿಸಲು ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚನೆ

ರಾಜ್ಯ

ಚಿತ್ರದುರ್ಗದಲ್ಲಿ 164 ಬಾಲಗರ್ಭಿಣಿಯರು ಪತ್ತೆ ಎಫ್.ಐ.ಆರ್ ದಾಖಲಿಸಲು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚನೆ
 ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಈ ವರ್ಷದ ಏಪ್ರಿಲ್ ನಿಂದ ಜುಲೈ ವರೆಗೆ ಒಟ್ಟು 164 ಬಾಲ ಗರ್ಭಿಣಿಯರು ಪತ್ತೆಯಾಗಿರುವುದು ಕಳವಳಕಾರಿ ಸಂಗತಿಯಾಗಿದ್ದು, ಈ ಪ್ರಕರಣಗಳಲ್ಲಿ ವೈದ್ಯಾಧಿಕಾರಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ತಪ್ಪದೇ ಎಫ್.ಐ.ಆರ್ ದಾಖಲಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚಿಸಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬAಧಿಸಿದAತೆ ಚಿತ್ರದುರ್ಗ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.
ತಾಯಿ ಕಾರ್ಡು ನೀಡುವಾಗ ಕಡ್ಡಾಯವಾಗಿ ಜನನ ಪ್ರಮಾಣ ಪತ್ರವನ್ನೇ ವಯಸ್ಸಿಗೆ ಆಧಾರವಾಗಿ ಪರಿಗಣಿಸಬೇಕು. ಇದನ್ನು ಹೊರತು ಪಡಿಸಿದರೆ ಶಾಲಾ ದಾಖಲೆ ಹಾಗೂ ವೈದ್ಯಕೀಯ ಪ್ರಮಾಣ ಪತ್ರಗಳು ಮಾತ್ರ ವಯಸ್ಸಿನ ಧೃಡೀಕರಣಕ್ಕೆ ಊರ್ಜಿತವಾಗುತ್ತವೆ. ಆಧಾರ್ ಅನ್ನು ಕೇವಲ ವಿಳಾಸದ ಧೃಡೀಕರಣಕ್ಕೆ ಮಾತ್ರ ಪರಿಗಣಿಸುವಂತೆ ಆರೋಗ್ಯ ಇಲಾಖೆ ಸ್ಪಷ್ಟವಾಗಿ ಸುತ್ತೋಲೆ ಹೊರಡಿಸಿದೆ. ವೈದ್ಯಾಧಿಕಾರಿಗಳಿಗೆ ಬಾಲಗರ್ಭಿಣಿಯ ಶಂಕೆ ಉಂಟಾದ ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 1.5 ಲಕ್ಷ ಬಾಲಗರ್ಭಿಣಿ ಪ್ರಕರಣಗಳು ಇರುವ ಬಗ್ಗೆ ಮಾಹಿತಿಯಿದೆ. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ 300 ಕ್ಕೂ ಹೆಚ್ಚು ಪ್ರಕರಣಗಳು ಆರ್.ಸಿ.ಹೆಚ್ ತಂತ್ರಾAಶದಲ್ಲಿ ಗೋಚರವಾಗುತ್ತಿವೆ. ರಾಜ್ಯ ಸರ್ಕಾರ ಬಾಲಗರ್ಭಿಣಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳು ಸಹ ಆಯಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಅಧಿಕಾರಿಗಳು ಇದರ ಗಂಭೀರತೆ ಅರಿತು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿ ನಡೆಸಿದರೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಹಾಗೂ ಬಾಲ ಗರ್ಭಿಣಿ ಪ್ರಕರಣಗಳನ್ನು ತಗ್ಗಿಸಬಹುದು. ಶಾಲೆಯಿಂದ ಹೊರಗುಳಿದ ಮಕ್ಕಳೇ ಇಂತಹ ಸಾಮಾಜಿಕ ಅನಿಷ್ಟಗಳಿಗೆ ಬಲಿ ಪಶುಗಳಾಗುತ್ತಾರೆ. ಪ್ರತಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಮಹಿಳಾ ಮಕ್ಕಳ ಕಾವಲು ಸಮಿತಿಯ ಜೊತೆಗೆ, ಮಕ್ಕಳ ಶಿಕ್ಷಣ ಕಾರ್ಯಪಡೆಯನ್ನು ಸಹ ರಚನೆ ಮಾಡಬೇಕು. ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಅಂಕಿ ಸಂಖ್ಯೆಗಳ ನಿಖರ ಮಾಹಿತಿ ಇರಬೇಕು. ಅಶಕ್ತ, ನಿರ್ಗತಿಕ ಪೋಷಕರ ಬಳಿ ಇರುವ ಮಕ್ಕಳು, ಅನಾಥ ಮಕ್ಕಳು, ತಂದೆ ತಾಯಿ ಇರದೆ ಬಂಧುಗಳ ಬಳಿ ಇರುವ ಮಕ್ಕಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು. ಇಂತಹ ಮಕ್ಕಳ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುವ ಸಂಭವ ಇರುತ್ತದೆ ಎಂದು ಡಾ.ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಎಲ್ಲಾ ಶಾಲೆ, ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಮಕ್ಕಳ ರಕ್ಷಣಾ ನೀತಿಯ ಅನುಷ್ಠಾನವಾಗಬೇಕು. ಇದರ ಜೊತೆಗೆ ಜಿಲ್ಲೆಯ ಯಾವುದೇ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿಯು ಪಾಲನೆಯಾಗುತ್ತಿಲ್ಲ. ಕೂಡಲೇ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಮಾಡಬೇಕು ಎಂದು ಸೂಚಿಸಿದರು.
ನಗರ ಪ್ರದೇಶದಲ್ಲಿ ನಗರಸಭೆ ತಮ್ಮ ಕ್ರೀಡಾ ಅನುದಾನದಲ್ಲಿ ಅಂಗನವಾಡಿಗಳಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆರ್.ಬಿ.ಎಸ್.ಕೆ ಅಡಿ ಗಂಭೀರ ಖಾಯಿಲೆಗೆ ತುತ್ತಾದ ಮಕ್ಕಳ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳಲ್ಲಿ ಕೂಡಲೇ ಎಫ್.ಐ.ಆರ್ ಮಾಡಬೇಕು. ಘಟನಾ ಸ್ಥಳದ ವ್ಯಾಪ್ತಿ ಬೇರೆಯಾಗಿದ್ದರೆ. ಶೂನ್ಯ ಎಫ್.ಐ.ಆರ್ ದಾಖಲಿಸಿ ಸೂಕ್ತ ಕ್ರಮಕ್ಕಾಗಿ ಸಂಬAಧಪಟ್ಟ ಪೊಲೀಸ್ ಠಾಣೆಗೆ ರವಾನಿಸಬೇಕು ಎಂದರು.
ಸಭೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ.ಇಓ ಹನುಮಂತಪ್ಪ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಸೇರಿದಂತೆ ಮಕ್ಕಳ ರಕ್ಷಣಾ ನೀತಿ ಅನುಷ್ಠಾನದ ಎಲ್ಲಾ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

 

 

Leave a Reply

Your email address will not be published. Required fields are marked *