ಅನ್ನಕ್ಕೋಸ್ಕರ, ಹುದ್ದೆಗೋಸ್ಕರ ಯಾರೂ ಜಾತಿಗಳನ್ನು ಒಡೆಯಬಾರದು

ಜಿಲ್ಲಾ ಸುದ್ದಿ

ಹಿರಿಯೂರು : ” ಅನ್ನಕ್ಕೋಸ್ಕರ, ಹುದ್ದೆಗೋಸ್ಕರ ಯಾರೂ ಜಾತಿಗಳನ್ನು ಒಡೆಯಬಾರದು. ” ಎಂದು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ನೆಹರೂ ಮೈದಾನದಲ್ಲಿ ಗುರುವಾರ ನಡೆದ ಶ್ರೀ ಕೆಂಪೇಗೌಡ ಜಯಂತಿ ಹಾಗೂ ಒಕ್ಕಲಿಗರ ಬೃಹತ್ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ” ಇಂದು ರಾಜ್ಯದಲ್ಲಿ ಎರಡು ದೊಡ್ಡ ಜಾತಿಗಳು ಸಂಕಷ್ಟದಲ್ಲಿವೆ. ಒಕ್ಕಲಿಗ ಮತ್ತು ವೀರಶೈವ ಜಾತಿಗಳನ್ನು ಒಡೆದು ರಾಜಕಾರಣ ಮಾಡುವ ಹುನ್ನಾರ ನಡೆಯುತ್ತಿದ್ದು ಈ ಎರಡು ಜಾತಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ . ಒಕ್ಕಲಿಗ ಅನ್ನೋದು ಒಂದು ದೊಡ್ಡ ಜಾತಿ. ಕುಂಚಿಟಿಗ ಸಮಾಜ ಅದರ ಉಪಜಾತಿ. ಓಬಿಸಿ ವಿಷಯ ಇಟ್ಟುಕೊಂಡು ಸಮುದಾಯ ಇಬ್ಭಾಗ ಮಾಡಬೇಡಿ. ನಮ್ಮ ಉಪಜಾತಿಗೆ ಅಂತ ಪತ್ರ ಬರೆದಾಗ ತಕ್ಷಣ ಸ್ಪಂದಿಸಿದ್ದ ಕುಮಾರಸ್ವಾಮಿ ಓಬಿಸಿ ಪಟ್ಟಿಗೆ ಸೇರಿಸಿ ಅಂತ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ಮುಖ್ಯಮಂತ್ರಿಗಳು ಸಹ ಓಬಿಸಿ ಪಟ್ಟಿಗೆ ಸೇರಿಸಲು ಸಹಕಾರ ನೀಡಲು ಒಪ್ಪಿದ್ದಾರೆ. ಬರುವ ದಿನಗಳಲ್ಲಿ ಅಧಿಕಾರ ಡಿಕೆ, ಹೆಚ್ ಡಿಕೆ ಯಾರಿಗೆ ಸಿಕ್ಕರೂ ಸ್ವಾಗತಿಸೋಣ. ಯಾರಿಗೆ ಪೆನ್ನು ಬಂದರೂ ಜನಾಂಗಕ್ಕೆ ಬಂದಂತೆ. ” ಎಂದರು.

 

 

 

ಆದಿ ಚುoಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ ” ಸರ್ವಧರ್ಮಗಳನ್ನು ಪೋಷಣೆ ಮಾಡಿದವರು ಕೆಂಪೇಗೌಡರು. ಅಂತಹ ಕೆಂಪೇಗೌಡರ ಹೆಸರಿನಲ್ಲಿ ಜಯಂತಿ ಮಾಡಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗುತ್ತಿದೆ. ಅನ್ನ ಬೆಳೆಯುವ ಜೊತೆಗೆ ಮಕ್ಕಳಿಗೆ ವಿದ್ಯೆ ನೀಡುವತ್ತ ಸಮಾಜದ ಬಂಧುಗಳು ಹೆಚ್ಚಿನ ಒತ್ತು ನೀಡಬೇಕು. ಈಗಾಗಲೇ ಇಲ್ಲಿ ಹಾಸ್ಟೆಲ್ ಕೆಲಸ ನಡೆಯುತ್ತಿದ್ದು ಬರುವ ದಿನಗಳಲ್ಲಿ ಶಾಲೆಯೂ ಆರಂಭವಾಗಲಿದ್ದು ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವತ್ತ ಎಲ್ಲರೂ ಪ್ರಯತ್ನಿಸಬೇಕು. ” ಎಂದರು. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ ” ಕೊಡುಗೈ ದಾನಿ ಸಮಾಜಗಳಲ್ಲಿ ಒಕ್ಕಲಿಗ ಸಮಾಜ ಪ್ರಮುಖವಾದುದು. ಕೆಂಪೇಗೌಡರು ಒಂದು ಜಾತಿಗೆ ಸೀಮಿತವಲ್ಲ. ಬೆಂಗಳೂರಲ್ಲಿ ಬರೀ ಒಕ್ಕಲಿಗರೇ ಇಲ್ಲ. ಎಲ್ಲಾ ಜನಾಂಗದವರು ನೆನೆಯುವಂತಹ ಮೇರು ವ್ಯಕ್ತಿತ್ವ ಅವರದು. ಈ ನಾಡನ್ನು ಆಳುವ ಅವಕಾಶ ನಮ್ಮ ಸಮಾಜಕ್ಕೆ ದೊರೆಯುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ .ನಮ್ಮ ಪಕ್ಷದಿಂದ ನಾನು, ಕಾಂಗ್ರೆಸ್ ನಿಂದ ಶಿವಕುಮಾರ್ ಹೋರಾಟ ನಡೆಸುತ್ತೇವೆ. ದೇವರ ಆಶೀರ್ವಾದ, ಗುರುಗಳ ಬೆಂಬಲ, ಜನರ ಆಸೆ ಇದ್ದಂತೆ ಆಗಲಿ.2008 ರಿಂದ ಹಿರಿಯೂರಿನಲ್ಲಿ ಇಷ್ಟೊಂದು ಜನರಿದ್ದು ಸಮಾಜದ ಒಬ್ಬ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಆಗಿಲ್ಲ. ನಮ್ಮಿಂದ ಬೇರೆಯವರಿಗೆ ಉಪಕಾರಗಳಾಗಿವೆ. ಆದರೆ ಅವರಿಂದ ನಮ್ಮ ಸಮಾಜಕ್ಕೆ ಶಕ್ತಿ ಸಿಕ್ಕಿಲ್ಲ. ಬರುವ ದಿನಗಳಲ್ಲಿ ಯಾವ ಪಕ್ಷವಾದರೂ ಆಗಲಿ ನಮ್ಮ ಸಮಾಜದ ಒಬ್ಬರು ಶಾಸಕರಾಗಲಿ. ” ಎಂದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ ” ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಕೆಡಿಸುವ ಪ್ರಯತ್ನ ಯಾರೂ ಮಾಡಬಾರದು. ರೈತರದು ವಿಶ್ವ ಜಾತಿ ಇದ್ದಂತೆ. ಕೃಷಿಕ, ಶಿಕ್ಷಕ, ಸೈನಿಕ, ಕಾರ್ಮಿಕ ಇಲ್ಲದೆ ಯಾವ ಸಮಾಜವು ಉಳಿಯಲಾರದು.ಸಮಾಜದ ಎಲ್ಲಾ ವರ್ಗಗಳಿಗೂ ಆಶ್ರಯವಾಗುವಂತಹ ಜನಾಂಗ ಒಕ್ಕಲಿಗ ಜನಾಂಗ. ನಾವು ಎಷ್ಟು ಸಂತೋಷವಾಗಿದ್ದೇವೆ ಎಂಬುದಕ್ಕಿಂತ ನಮ್ಮನ್ನು ನಂಬಿದವರನ್ನು ಎಷ್ಟು ಸಂತೋಷವಾಗಿಟ್ಟಿದ್ದೇವೆ ಎಂಬುದು ಮುಖ್ಯ. ಇಲ್ಲಿ ಯಾರೂ ಹೆಚ್ಚು ಕಡಿಮೆ ಅಲ್ಲ. ಅವರವರ ವೃತ್ತಿ ಅವರು ಮಾಡುತ್ತಾರೆ. ಯಾರನ್ನೂ ಅಗೌರವದಿಂದ ಕಾಣಬಾರದು. ರಕ್ತ, ಬೆವರು, ಕಣ್ಣೀರು ಮೂರೂ ಒಂದೇ ರುಚಿ ಇರುತ್ತವೆ. ಹಾಗಾಗಿ ಎಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಮುನ್ನಡೆಯೋಣ, ಜನಾಂಗದ ಮನೆ ಬಾಗಿಲಿಗೆ ಅಧಿಕಾರ ಬಂದಿದೆ. ಅದನ್ನು ಉಳಿಸಿಕೊಳ್ಳುವತ್ತ ಪ್ರಯತ್ನಿಸೋಣ. ” ಎಂದರು.ಈ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ,ನಿರ್ಮಾಪಕ ಉಮಾಪತಿ, ಮಾಜಿ ಸಚಿವ ಟಿಬಿ ಜಯಚಂದ್ರ,ಕಾಂಗ್ರೆಸ್ ವಕ್ತಾರ ಮುರುಳಿಧರ ಹಾಲಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ರಾಜು ಬೇತೂರು ಪಾಳ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ಯಶೋಧರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಮಚಂದ್ರಪ್ಪ,ಪಿಲಾಜನಹಳ್ಳಿ ಜಯಣ್ಣ, ಮಮತಾ ಕೃಷ್ಣಮೂರ್ತಿ, ಈರಲಿಂಗೇಗೌಡ, ಶ್ರವಣಗೆರೆ ಹನುಮಂತರಾಯ,ರೈತ ಮುಖಂಡ ಹೊರಕೇರಪ್ಪ,ಕಂದಿಕೆರೆ ಜಗದೀಶ್, ಬಿ ಹೆಚ್ ಮಂಜುನಾಥ್, ಹೆಚ್ ಆರ್ ತಿಮ್ಮಯ್ಯ, ಕಂದಿಕೆರೆ ರಂಗನಾಥ್, ಪೃಥ್ವಿ ಕೂಗಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *